03.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿರಾಕಾರ ತಂದೆಯು ನಿಮಗೆ ತಮ್ಮ ಮತವನ್ನು ಕೊಟ್ಟು ಆಸ್ತಿಕರನ್ನಾಗಿ ಮಾಡುತ್ತಾರೆ, ಆಸ್ತಿಕರಾದಾಗಲೇ ನೀವು ತಂದೆಯ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯ”

ಪ್ರಶ್ನೆ:
ಬೇಹದ್ದಿನ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಯಾವ ಎರಡು ಮಾತುಗಳ ಮೇಲೆ ಸಂಪೂರ್ಣ ಗಮನವಿಡಬೇಕು?

ಉತ್ತರ:
1. ವಿದ್ಯೆ, 2. ಸರ್ವೀಸ್. ಸರ್ವೀಸಿಗಾಗಿ ಬಹಳ ಒಳ್ಳೆಯ ಲಕ್ಷಣಗಳೂ ಇರಬೇಕು. ಈ ವಿದ್ಯೆಯು ಬಹಳ ಅದ್ಭುತವಾಗಿದೆ, ಇದರಿಂದ ನೀವು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ದ್ವಾಪರಯುಗದಿಂದ ಧನದಾನ ಮಾಡುವುದರಿಂದ ರಾಜ್ಯವು ಸಿಗುತ್ತದೆ ಆದರೆ ಈಗ ನೀವು ವಿದ್ಯೆಯಿಂದ ರಾಜಕುಮಾರ-ಕುಮಾರಿಯರಾಗುತ್ತೀರಿ.

ಗೀತೆ:
ನಮ್ಮ ತೀರ್ಥಸ್ಥಾನವು ಭಿನ್ನವಾಗಿದೆ..............

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಒಂದುಸಾಲನ್ನು ಕೇಳಿದಿರಿ. ನಿಮ್ಮ ತೀರ್ಥಸ್ಥಾನವಾಗಿದೆ -ಮನೆಯಲ್ಲಿ ಕುಳಿತಿದ್ದಂತೆಯೇ ಮೌನವಾಗಿದ್ದುಕೊಂಡು ಮುಕ್ತಿಧಾಮವನ್ನು ತಲುಪುವುದು. ಪ್ರಪಂಚದ ತೀರ್ಥಯಾತ್ರೆಗಳಂತೂ ಸಾಮಾನ್ಯವಾಗಿದೆ, ಆದರೆ ನಿಮ್ಮ ತೀರ್ಥಸ್ಥಾನವು ಭಿನ್ನವಾಗಿದೆ. ಮನುಷ್ಯರ ಬುದ್ಧಿಯೋಗವಂತೂ ಸಾಧು-ಸಂತರಕಡೆ ಬಹಳಷ್ಟು ಅಲೆದಾಡುತ್ತಿರುತ್ತದೆ. ನೀವು ಮಕ್ಕಳಿಗಂತೂ ಕೇವಲ ತಂದೆಯನ್ನೇ ನೆನಪು ಮಾಡುವ ಆದೇಶವು ಸಿಗುತ್ತದೆ. ಅವರು ನಿರಾಕಾರ ತಂದೆಯಾಗಿದ್ದಾರೆ, ನಿರಾಕಾರನನ್ನು ಒಪ್ಪುವವರು ನಿರಾಕಾರಿ ಮತದವರೆಂದಲ್ಲ. ಪ್ರಪಂಚದಲ್ಲಿ ಬಹಳಷ್ಟು ಮತ-ಮತಾಂತರಗಳಿವೆ. ಇದೊಂದು ನಿರಾಕಾರಿ ಮತವನ್ನು ನಿರಾಕಾರ ತಂದೆಯು ಹೇಳುತ್ತಾರೆ, ಇದರಿಂದ ಮನುಷ್ಯರು ಶ್ರೇಷ್ಠಾತಿಶ್ರೇಷ್ಠ ಪದವಿ, ಜೀವನ್ಮುಕ್ತಿ ಹಾಗೂ ಮುಕ್ತಿಯನ್ನು ಪಡೆಯುತ್ತಾರೆ. ಈ ಮಾತುಗಳನ್ನು ಏನೂ ಅರಿತುಕೊಂಡಿಲ್ಲ. ಇವರು ನಿರಾಕಾರನನ್ನು ಒಪ್ಪುವವರೆಂದು ಹೇಳಿಬಿಡುತ್ತಾರೆ. ಇಲ್ಲಿ ಅನೇಕಾನೇಕ ಮತಗಳಿವೆ, ಸತ್ಯಯುಗದಲ್ಲಂತೂ ಒಂದು ಮತವಿರುತ್ತದೆ, ಕಲಿಯುಗದಲ್ಲಿ ಅನೇಕ ಮತಗಳಿವೆ, ಅನೇಕಧರ್ಮಗಳಿವೆ. ಲಕ್ಷಾಂತರ-ಕೋಟ್ಯಾಂತರ ಮತಗಳಿರುತ್ತವೆ, ಮನೆ-ಮನೆಯಲ್ಲಿ ಪ್ರತಿಯೊಬ್ಬರದೂ ತನ್ನತನ್ನದೇ ಆದ ಮತವಿದೆ. ಇಲ್ಲಿ ನೀವು ಮಕ್ಕಳಿಗೆ ಒಬ್ಬ ತಂದೆಯೇ ಶ್ರೇಷ್ಠಾತಿಶ್ರೇಷ್ಠರನ್ನಾಗಿ ಮಾಡುವ ಸರ್ವಶ್ರೇಷ್ಠಮತವನ್ನು ಕೊಡುತ್ತಾರೆ. ನಿಮ್ಮ ಚಿತ್ರಗಳನ್ನು ನೋಡಿ ಅನೇಕರು ಹೇಳುತ್ತಾರೆ - ಇದೇನು ಮಾಡಿದ್ದೀರಿ? ಇಲ್ಲಿ ಮುಖ್ಯಮಾತೇನು? ಆಗ ನೀವು ತಿಳಿಸಿ - ಇದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಾಗಿದೆ, ಈ ಜ್ಞಾನದಿಂದ ನಾವು ಆಸ್ತಿಕರಾಗುತ್ತೇವೆ. ಆಸ್ತಿಕರಾದಾಗಲೇ ತಂದೆಯ ಆಸ್ತಿಯು ಸಿಗುತ್ತದೆ. ನಾಸ್ತಿಕರಾದ್ದರಿಂದ ಆಸ್ತಿಯನ್ನು ಕಳೆದುಕೊಂಡಿದ್ದೀರಿ. ಈಗ ನೀವು ಮಕ್ಕಳ ಕರ್ತವ್ಯವೇ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುವುದಾಗಿದೆ. ಈ ಪರಿಚಯವು ನಿಮಗೆ ತಂದೆಯಿಂದ ಸಿಕ್ಕಿದೆ. ತ್ರಿಮೂರ್ತಿಯ ಚಿತ್ರವಂತೂ ಬಹಳ ಸ್ಪಷ್ಟವಾಗಿದೆ, ಬ್ರಹ್ಮಾರವರ ಮೂಲಕ ಬ್ರಾಹ್ಮಣರು ಅವಶ್ಯವಾಗಿ ಬೇಕಲ್ಲವೆ! ಬ್ರಾಹ್ಮಣರಿಂದಲೇ ಯಜ್ಞವು ನಡೆಯುತ್ತದೆ. ಇದು ಬಹಳ ದೊಡ್ಡಯಜ್ಞವಾಗಿದೆ. ಮೊಟ್ಟಮೊದಲಿಗೆ ಇದನ್ನು ತಿಳಿಸಬೇಕು - ತಂದೆಯು ಸರ್ವಶ್ರೇಷ್ಠನಾಗಿದ್ದಾರೆ, ಎಲ್ಲಾ ಆತ್ಮಗಳು ಸಹೋದರ-ಸಹೋದರರಾಗಿದ್ದಾರೆ, ಎಲ್ಲರೂ ಒಬ್ಬ ತಂದೆಯನ್ನೇ ನೆನಪು ಮಾಡುತ್ತಾರೆ. ಅವರಿಗೆ ತಂದೆ ಎಂದು ಹೇಳುತ್ತಾರೆ. ಆಸ್ತಿಯೂ ಸಹ ರಚಯಿತ ತಂದೆಯಿಂದಲೇ ಸಿಗುತ್ತದೆ, ರಚನೆಯಿಂದಂತೂ ಸಿಗಲು ಸಾಧ್ಯವಿಲ್ಲ ಆದ್ದರಿಂದ ಈಶ್ವರನನ್ನು ಎಲ್ಲರೂ ನೆನಪು ಮಾಡುತ್ತಾರೆ. ತಂದೆಯಂತೂ ಸ್ವರ್ಗದ ರಚಯಿತನಾಗಿದ್ದಾರೆ ಮತ್ತು ಭಾರತದಲ್ಲಿಯೇ ಬಂದು ಈ ಕಾರ್ಯವನ್ನು ಮಾಡುತ್ತಾರೆ. ತ್ರಿಮೂರ್ತಿಯ ಚಿತ್ರವು ಬಹಳ ಒಳ್ಳೆಯ ಚಿತ್ರವಾಗಿದೆ. ಇವರು ತಂದೆ, ಇವರು ದಾದಾರವರಾಗಿದ್ದಾರೆ. ಬ್ರಹ್ಮಾರವರ ಮೂಲಕ ತಂದೆಯು ಸೂರ್ಯವಂಶಿ ಮನೆತನದ ಸ್ಥಾಪನೆಯನ್ನು ಮಾಡುತ್ತಿದ್ದಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಗುರಿ-ಉದ್ದೇಶವು ನಿಮ್ಮ ಸನ್ಮುಖದಲ್ಲಿದೆ ಆದ್ದರಿಂದ ತಂದೆಯು ಪದಕ (ಬ್ಯಾಡ್ಜ್) ಗಳನ್ನೂ ಮಾಡಿಸುತ್ತಾರೆ. ತಿಳಿಸಿ - ನಾವು ನಿಮಗೆ ಸಾರರೂಪದಲ್ಲಿ ಎರಡು ಶಬ್ಧಗಳಲ್ಲಿ ತಿಳಿಸುತ್ತೇವೆ, ತಂದೆಯಿಂದ ಸೆಕೆಂಡಿನಲ್ಲಿ ಆಸ್ತಿಯು ಸಿಗಬೇಕಲ್ಲವೆ! ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ ಅಂದಾಗ ಈ ಪದಕಗಳು ಬಹಳ ಒಳ್ಳೆಯ ವಸ್ತುವಾಗಿದೆ ಆದರೆ ಅನೇಕ ದೇಹಾಭಿಮಾನಿ ಮಕ್ಕಳು ಇದನ್ನು ತಿಳಿದುಕೊಂಡೇ ಇಲ್ಲ. ಈ ಪದಕದಲ್ಲಿ ಒಂದುಸೆಕೆಂಡಿನ ಪೂರ್ಣಜ್ಞಾನವಿದೆ. ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ತಂದೆಯೇ ಹೊಸಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಈ ಪುರುಷೋತ್ತಮ ಸಂಗಮಯುಗದ್ದೇ ಗಾಯನವಿದೆ ಅಂದಾಗ ಈ ಸಂಪೂರ್ಣಜ್ಞಾನವು ಬುದ್ಧಿಯಲ್ಲಿ ಹನಿಯುತ್ತಿರಬೇಕು. ಕೆಲವರದು ಯೋಗವಿದ್ದರೆ, ಜ್ಞಾನವಿರುವುದಿಲ್ಲ, ಧಾರಣೆಯಿರುವುದಿಲ್ಲ. ಸರ್ವೀಸ್ ಮಾಡುವಂತಹ ಮಕ್ಕಳಿಗೆ ಜ್ಞಾನದ ಧಾರಣೆಯು ಚೆನ್ನಾಗಿ ಆಗುತ್ತದೆ. ತಂದೆಯು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸೇವೆ ಮಾಡುತ್ತಾರೆ. ಮಕ್ಕಳು ಯಾವುದೇ ಸೇವೆ ಮಾಡದಿದ್ದರೆ ಅವರೇನು ಪ್ರಯೋಜನ? ಅಂತಹವರು ತಂದೆಯ ಹೃದಯವನ್ನೇರಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ - ನಾಟಕದಲ್ಲಿ ನನ್ನ ಪಾತ್ರವೇ ರಾವಣರಾಜ್ಯದಿಂದ ಎಲ್ಲರನ್ನೂ ಬಿಡಿಸುವುದಾಗಿದೆ. ರಾಮರಾಜ್ಯ ಹಾಗೂ ರಾವಣರಾಜ್ಯವೆಂದು ಭಾರತದಲ್ಲಿಯೇ ಗಾಯನವಿದೆ. ಈಗ ರಾಮನು ಯಾರು? ಇದನ್ನೂ ಸಹ ತಿಳಿದುಕೊಂಡಿಲ್ಲ. ಪತಿತ-ಪಾವನ ಭಕ್ತರ ಭಗವಂತನು ಒಬ್ಬನೇ ಎಂದು ಹಾಡುತ್ತಾರೆ ಅಂದಾಗ ಯಾರೇ ಒಳಗಡೆ ಮೊಟ್ಟಮೊದಲಿಗೆ ಬರಲಿ ಅವರಿಗೆ ತಂದೆಯ ಪರಿಚಯ ನೀಡಿ. ಪ್ರತಿಯೊಬ್ಬ ವ್ಯಕ್ತಿಯನ್ನು ನೋಡಿ ತಿಳಿಸಬೇಕು. ಬೇಹದ್ದಿನ ತಂದೆಯು ಬೇಹದ್ದಿನ ಸುಖದ ಆಸ್ತಿಯನ್ನು ಕೊಡುವುದಕ್ಕಾಗಿಯೇ ಬರುತ್ತಾರೆ, ಅವರಿಗೆ ತಮ್ಮ ಶರೀರವೇ ಇಲ್ಲವೆಂದರೆ ಆಸ್ತಿಯನ್ನು ಹೇಗೆ ಕೊಡುವರು! ಆದ್ದರಿಂದಲೇ ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ತನುವಿನಿಂದ ಓದಿಸಿ, ರಾಜಯೋಗವನ್ನು ಕಲಿಸಿ ಈ ಪದವಿಯನ್ನು ಪ್ರಾಪ್ತಿ ಮಾಡಿಸುತ್ತೇನೆ. ಈ ಪದಕದಲ್ಲಿ ಸೆಕೆಂಡಿನ ತಿಳುವಳಿಕೆಯಿದೆ. ಎಷ್ಟೊಂದು ಚಿಕ್ಕಪದಕವಿದೆ ಆದರೆ ತಿಳಿಸಿಕೊಡುವವರು ಬಹಳ ದೇಹೀ-ಅಭಿಮಾನಿಗಳಾಗಿರಬೇಕು. ಇದರಲ್ಲಿ ಬಹಳ ಕಡಿಮೆಯಿದ್ದಾರೆ. ದೇಹೀ-ಅಭಿಮಾನಿಯಾಗುವ ಪರಿಶ್ರಮವನ್ನು ಯಾರೂ ಪಡುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಚಾರ್ಟನ್ನು ಇಟ್ಟು ನೋಡಿಕೊಳ್ಳಿ, ಇಡೀ ದಿನದಲ್ಲಿ ನಾನು ಎಷ್ಟು ಸಮಯ ನೆನಪು ಮಾಡುತ್ತೇನೆ? ಇಡೀ ದಿನ ಕಛೇರಿಯಲ್ಲಿ ಕೆಲಸ ಮಾಡುತ್ತಲೂ ನೆನಪಿನಲ್ಲಿರಬೇಕು. ಕರ್ಮವನ್ನಂತೂ ಮಾಡಲೇಬೇಕಾಗಿದೆ. ಈ ಯೋಗದಲ್ಲಿ ಕುಳ್ಳರಿಸಿ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಕರ್ಮವನ್ನಂತೂ ಮಾಡುವುದಿಲ್ಲ ಆದರೆ ಇಡೀ ದಿನದಲ್ಲಿ ನೀವು ಕರ್ಮಮಾಡುತ್ತಾ ನೆನಪು ಮಾಡಬೇಕು ಇಲ್ಲವೆಂದರೆ ಕುಳಿತುಕೊಳ್ಳುವ ಹವ್ಯಾಸವಾಗಿಬಿಡುತ್ತದೆ. ಕರ್ಮಮಾಡುತ್ತಾ ನೆನಪಿನಲ್ಲಿದ್ದಾಗ ಕರ್ಮಯೋಗಿಗಳೆನಿಸಿಕೊಳ್ಳುತ್ತೀರಿ. ಪಾತ್ರವನ್ನಂತೂ ಅವಶ್ಯವಾಗಿ ಅಭಿನಯಿಸಬೇಕಾಗುತ್ತದೆ. ಇದರಲ್ಲಿ ಮಾಯೆಯ ವಿಘ್ನಗಳು ಬರುತ್ತವೆ. ಸತ್ಯತೆಯಿಂದ ಚಾರ್ಟನ್ನೂ ಸಹ ಯಾರೂ ಬರೆಯುವುದಿಲ್ಲ. ಅರ್ಧಗಂಟೆ, ಮುಕ್ಕಾಲುಗಂಟೆ ನೆನಪಿನಲ್ಲಿದ್ದೆವೆಂದು ಕೆಲವರು ಬರೆಯುತ್ತಾರೆ ಅಂದರೆ ಕೇವಲ ಮುಂಜಾನೆಯಲ್ಲಿಯೇ ನೆನಪಿನಲ್ಲಿ ಕುಳಿತುಕೊಳ್ಳುತ್ತಾರೆಂದರ್ಥ. ಭಕ್ತಿಮಾರ್ಗದಲ್ಲಿಯೂ ಸಹ ಬೆಳಗ್ಗೆ ಎದ್ದು ರಾಮಸ್ಮರಣೆ ಮಾಡುತ್ತಾರೆ ಅಂದರೆ ಆ ಸಮಯದಲ್ಲಿ ಒಬ್ಬರದೇ ನೆನಪಿನಲ್ಲಿರುತ್ತಾರೆಂದಲ್ಲ. ಬಹಳಷ್ಟು ಬೇರೆ-ಬೇರೆ ಸಂಕಲ್ಪಗಳು ಬರುತ್ತಿರುತ್ತವೆ. ತೀವ್ರಭಕ್ತರ ಬುದ್ಧಿಯು ಮಾತ್ರ ಸ್ವಲ್ಪ ಸ್ಥಿರವಾಗಿರುತ್ತದೆ. ಇದಂತೂ ಅಜಪಾಜಪವಾಗಿದೆ. ಹೊಸಮಾತಲ್ಲವೆ! ಗೀತೆಯಲ್ಲಿಯೂ ಮನ್ಮನಾಭವ ಶಬ್ಧವಿದೆ ಆದರೆ ಕೃಷ್ಣನ ಹೆಸರನ್ನು ಬರೆದಿರುವುದರಿಂದ ಕೃಷ್ಣನನ್ನು ನೆನಪು ಮಾಡುತ್ತಾರೆ ಮತ್ತೆ ಏನನ್ನೂ ತಿಳಿದುಕೊಂಡಿಲ್ಲ ಆದ್ದರಿಂದ ಈ ಪದಕವಂತೂ ಅವಶ್ಯವಾಗಿ ಜೊತೆಯಲ್ಲಿರಬೇಕು ಇದರಿಂದ ತಿಳಿಸಿ - ತಂದೆಯು ಬ್ರಹ್ಮಾರವರ ತನುವಿನಲ್ಲಿ ಕುಳಿತು ತಿಳಿಸುತ್ತಾರೆ, ನಾವು ಆ ತಂದೆಯೊಂದಿಗೆ ಪ್ರೀತಿಯನ್ನಿಡುತ್ತೇವೆ. ಮನುಷ್ಯರಿಗಂತೂ ಆತ್ಮನ ಜ್ಞಾನವಾಗಲಿ, ಪರಮಾತ್ಮನ ಜ್ಞಾನವಾಗಲಿ ಇಲ್ಲ. ಒಬ್ಬ ತಂದೆಯ ವಿನಃ ಈ ಜ್ಞಾನವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ತ್ರಿಮೂರ್ತಿ ಶಿವನ ಚಿತ್ರವಂತೂ ಎಲ್ಲದಕ್ಕಿಂತ ಮುಖ್ಯವಾಗಿದೆ - ತಂದೆ ಮತ್ತು ಆಸ್ತಿ. ಈ ಚಕ್ರವನ್ನು ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಪ್ರದರ್ಶನಿಯಿಂದಲೂ ಸಹ ಪ್ರಜೆಗಳಂತೂ ಲಕ್ಷಾಂತರ ಮಂದಿ ಆಗುತ್ತಿರುತ್ತಾರೆ. ರಾಜರು ಕೆಲವರೇ ಇರುತ್ತಾರೆ. ಅವರ ಪ್ರಜೆಗಳಂತೂ ಕೋಟ್ಯಾಂತರ ಅಂದಾಜಿನಲ್ಲಿರುತ್ತಾರೆ ಹಾಗೆಯೇ ಇಲ್ಲಿ ಪ್ರಜೆಗಳು ಅನೇಕರಾಗುತ್ತಾರೆ ಆದರೆ ರಾಜರನ್ನಾಗಿ ಮಾಡಲು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಯಾರು ಹೆಚ್ಚಿನ ಸೇವೆ ಮಾಡುವರೋ ಅವರು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಕೆಲವು ಮಕ್ಕಳಿಗೆ ಬಹಳ ಸರ್ವೀಸಿನ ಉಮ್ಮಂಗವಿದೆ. ಬಾಬಾ, ತಿನ್ನುವುದಕ್ಕಂತೂ ಇದ್ದೇ ಇದೆ, ನೌಕರಿ ಬಿಟ್ಟುಬಿಡುವುದೆ ಎಂದು ಕೇಳುತ್ತಾರೆ. ತಂದೆಯ ಮಕ್ಕಳಾಗಿಬಿಟ್ಟರೆ ಶಿವತಂದೆಯ ಪಾಲನೆಯನ್ನು ತೆಗೆದುಕೊಳ್ಳುವಿರಿ. ಆದರೆ ತಂದೆಯು ತಿಳಿಸುತ್ತಾರೆ - ನಾನು ವಾನಪ್ರಸ್ಥದಲ್ಲಿ ಪ್ರವೇಶ ಮಾಡಿದ್ದೇನಲ್ಲವೆ! ಮಾತೆಯರೂ ಸಹ ಇನ್ನೂ ಯುವತಿಯಾಗಿದ್ದರೆ ಮನೆಯಲ್ಲಿರುತ್ತಾ ಇಬ್ಬರೂ ಸರ್ವೀಸ್ ಮಾಡಬೇಕಾಗಿದೆ. ತಂದೆಯು ಪ್ರತಿಯೊಬ್ಬರ ಸ್ಥಿತಿಗತಿಯನ್ನು ನೋಡಿ ಸಲಹೆ ಕೊಡುತ್ತಾರೆ. ವಿವಾಹ ಇತ್ಯಾದಿಗಳಿಗಾಗಿ ಒಂದುವೇಳೆ ಅನುಮತಿ ಕೊಡದಿದ್ದರೆ ಬಹಳಷ್ಟು ಹೊಡೆದಾಟಗಳಾಗುತ್ತವೆ ಆದ್ದರಿಂದ ಪ್ರತಿಯೊಬ್ಬರ ಲೆಕ್ಕಾಚಾರವನ್ನು ನೋಡಿ ಸಲಹೆ ಕೊಡುತ್ತಾರೆ. ಕುಮಾರರಾಗಿದ್ದರೆ ನೀವು ಸರ್ವೀಸ್ ಮಾಡಿ ಎಂದು ಹೇಳುತ್ತಾರೆ. ಸರ್ವೀಸ್ ಮಾಡಿ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಆ ಲೌಕಿಕತಂದೆಯಿಂದ ನಿಮಗೇನು ಸಿಗುತ್ತದೆ? ಅದೆಲ್ಲವೂ ಮಣ್ಣುಪಾಲಾಗುತ್ತದೆ. ದಿನ-ಪ್ರತಿದಿನ ಸಮಯವು ಕಳೆಯುತ್ತಾ ಹೋಗುತ್ತದೆ. ನಮ್ಮ ಆಸ್ತಿಗೆ ಮಕ್ಕಳು ವಾರಸುಧಾರರಾಗುತ್ತಾರೆಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ - ನಿಮ್ಮಿಂದ ಅವರಿಗೆ ಏನೂ ಸಿಗುವುದಿಲ್ಲ ಏಕೆಂದರೆ ಸಂಪತ್ತೆಲ್ಲವೂ ಮಣ್ಣುಪಾಲಾಗಿಬಿಡುತ್ತದೆ. ನಮ್ಮ ನಂತರದವರು ತಿನ್ನುತ್ತಾರೆಂದು ಅವರು ತಿಳಿಯುತ್ತಾರೆ. ಧನವಂತರ ಹಣವು ಸಮಾಪ್ತಿಯಾಗುವುದರಲ್ಲಿ ತಡವಾಗುವುದಿಲ್ಲ ಏಕೆಂದರೆ ಮೃತ್ಯುವು ಸನ್ಮುಖದಲ್ಲಿಯೇ ಇದೆ. ಯಾರೂ ಸಹ ಆ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ - ಈ ಮಾತುಗಳನ್ನು ಯಥಾರ್ಥವಾಗಿ ಕೆಲವರೇ ತಿಳಿಸಿಕೊಡುತ್ತಾರೆ. ಹೆಚ್ಚಿನ ಸರ್ವೀಸ್ ಮಾಡುವವರೇ ಉತ್ತಮ ಪದವಿಯನ್ನು ಪಡೆಯುತ್ತಾರೆ ಅಂದಮೇಲೆ ಅವರಪ್ರತಿ ಗೌರವವನ್ನೂ ಇಡಬೇಕು. ಅದನ್ನು ಇವರಿಂದ (ಬ್ರಹ್ಮಾ) ಕಲಿಯಬೇಕಾಗಿದೆ. 21 ಜನ್ಮಗಳಿಗಾಗಿ ಗೌರವವನ್ನಿಡಬೇಕಾಗಿದೆ. ಅವಶ್ಯವಾಗಿ ಅವರು ಶ್ರೇಷ್ಠಪದವಿಯನ್ನು ಪಡೆಯುತ್ತಾರೆಂದರೆ ಅವರ ಪ್ರತಿ ಎಲ್ಲಿಯಾದರೂ ಗೌರವವು ಇದ್ದೇ ಇದೆ. ತಾವೂ ಸಹ ತಿಳಿದುಕೊಳ್ಳಲು ಸಾಧ್ಯವಿದೆ, ಏನು ಸಿಗುತ್ತದೆಯೋ ಅದು ಒಳ್ಳೆಯದೇ ಆಗಿದೆ, ಅದರಲ್ಲಿಯೇ ಖುಷಿಪಡುತ್ತಾರೆ.

ಬೇಹದ್ದಿನ ರಾಜ್ಯಪದವಿಗಾಗಿ ವಿದ್ಯೆ ಮತ್ತು ಸರ್ವೀಸಿನ ಮೇಲೆ ಪೂರ್ಣಗಮನ ಇರಬೇಕು. ಇದು ಬೇಹದ್ದಿನ ವಿದ್ಯೆಯಾಗಿದೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ. ಈ ವಿದ್ಯೆಯಿಂದ ಇಲ್ಲಿ ನೀವು ಓದಿ ರಾಜಕುಮಾರರಾಗುತ್ತೀರಿ. ಯಾವುದೇ ಮನುಷ್ಯರು ಧನದಾನ ಮಾಡುತ್ತಾರೆಂದರೆ ಅವರು ರಾಜನ ಬಳಿ ಅಥವಾ ಸಾಹುಕಾರರ ಬಳಿ ಜನ್ಮ ತೆಗೆದುಕೊಳ್ಳುತ್ತಾರೆ ಆದರೆ ಅದು ಅಲ್ಪಕಾಲದ ಸುಖವಾಗಿದೆ. ಇಲ್ಲಿ ಇದು ಬೇಹದ್ದಿನ ಸುಖವನ್ನು ಪಡೆಯುವ ವಿದ್ಯೆಯಾಗಿದೆ ಅಂದಮೇಲೆ ಈ ವಿದ್ಯೆಯ ಮೇಲೆ ಬಹಳ ಗಮನವಿಡಬೇಕು, ಸರ್ವೀಸಿನ ಚಿಂತೆಯಿರಬೇಕು - ನಾವು ನಮ್ಮ ಹಳ್ಳಿಗೆ ಹೋಗಿ ಸರ್ವೀಸ್ ಮಾಡಬೇಕು. ಇದರಿಂದ ಅನೇಕರ ಕಲ್ಯಾಣವಾಗುವುದು. ತಂದೆಗೆ ಗೊತ್ತಿದೆ - ಬಹುಷಃ ಇಂತಹ ಸರ್ವೀಸಿನ ಉಮ್ಮಂಗವು ಯಾರಲ್ಲಿಯೂ ಇಲ್ಲ. ಲಕ್ಷಣಗಳೂ ಸಹ ಚೆನ್ನಾಗಿರಬೇಕಲ್ಲವೆ. ಸೇವಾಭಂಗ ಮಾಡಿ ಇನ್ನೂ ಯಜ್ಞದ ಹೆಸರನ್ನು ಕೆಡಿಸಿ ತಮ್ಮ ನಷ್ಟವನ್ನುಂಟು ಮಾಡಿಕೊಳ್ಳುವುದಲ್ಲ. ತಂದೆಯಂತೂ ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ಈ ಪದಕಗಳನ್ನು ಮಾಡಿಸುವುದಕ್ಕಾಗಿಯೂ ಸಹ ತಂದೆಗೆ ಎಷ್ಟೊಂದು ವಿಚಾರವಿರುತ್ತದೆ. ಈ ಲಕ್ಷ್ಮಿ-ನಾರಾಯಣರ ಟ್ರಾನ್ಸ್ಲೇಟ್ ಚಿತ್ರವೂ ಸಹ ಬಹಳ ಚೆನ್ನಾಗಿದೆ ಆದರೆ ಮಕ್ಕಳಮೇಲೆ ಇಂದು ಬೃಹಸ್ಪತಿಯ ದೆಶೆಯಿದ್ದರೆ ಮತ್ತೆ ನಾಳೆ ರಾಹುವಿನ ದೆಶೆಯು ಕುಳಿತುಕೊಳ್ಳುತ್ತದೆ. ನಾಟಕದಲ್ಲಿ ಸಾಕ್ಷಿಯಾಗಿ ಪಾತ್ರವನ್ನು ನೋಡಬೇಕಾಗಿದೆ. ಶ್ರೇಷ್ಠಪದವಿಯನ್ನು ಪಡೆಯುವವರು ಬಹಳ ಕಡಿಮೆಯಿರುತ್ತಾರೆ. ಕೆಲವರಿಗೆ ಮತ್ತೆ ಗ್ರಹಚಾರವು ಕಳೆಯುವ ಸಾಧ್ಯತೆಯೂ ಇದೆ. ಗ್ರಹಚಾರವು ಕಳೆಯುತ್ತದೆಯೆಂದರೆ ಮತ್ತೆ ಅವರು ಮೇಲೇರುತ್ತಾರೆ. ಪುರುಷಾರ್ಥ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಇಲ್ಲವೆಂದರೆ ಕಲ್ಪ-ಕಲ್ಪಾಂತರಕ್ಕಾಗಿ ಸತ್ಯನಾಶವಾಗಿಬಿಡುವುದು. ಕಲ್ಪದ ಹಿಂದಿನತರಹ ಗ್ರಹಚಾರವು ಕುಳಿತುಕೊಂಡಿದೆ ಎಂದು ತಂದೆಯು ತಿಳಿಯುತ್ತಾರೆ. ಶ್ರೀಮತದನುಸಾರ ನಡೆಯಲಿಲ್ಲವೆಂದರೆ ಪದವಿಯೂ ಸಿಗುವುದಿಲ್ಲ. ಭಗವಂತನ ಶ್ರೀಮತವು ಸರ್ವಶ್ರೇಷ್ಠವಾಗಿದೆ. ಈ ಲಕ್ಷ್ಮಿ-ನಾರಾಯಣರ ಚಿತ್ರವನ್ನು ನಿಮ್ಮ ವಿನಃ ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ಚಿತ್ರವನ್ನು ಬಹಳ ಚೆನ್ನಾಗಿ ಮಾಡಿಸಿದ್ದೀರಿ ಎಂದಷ್ಟೇ ಹೇಳುತ್ತಾರೆ. ಈ ಚಿತ್ರವನ್ನು ನೋಡಿದಾಗ ನಿಮಗೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನ ಇಡೀ ಸೃಷ್ಟಿಚಕ್ರವೇ ಬುದ್ಧಿಯಲ್ಲಿ ಬಂದುಬಿಡುತ್ತದೆ. ನಂಬರ್ವಾರ್ ಪುರುಷಾರ್ಥದನುಸಾರ ನೀವು ಜ್ಞಾನಪೂರ್ಣರಾಗಿದ್ದೀರಿ. ತಂದೆಗೆ ಈ ಚಿತ್ರವನ್ನು ನೋಡಿ ಬಹಳ ಖುಷಿಯಾಗುತ್ತದೆ. ನಾವು ಓದಿ ಈ ರೀತಿಯಾಗುತ್ತೇವೆಂದು ವಿದ್ಯಾರ್ಥಿಗಳಿಗೆ ಖುಷಿಯಿರಬೇಕಲ್ಲವೆ. ವಿದ್ಯೆಯಿಂದಲೇ ಉತ್ತಮ ಪದವಿಯು ಸಿಗುತ್ತದೆ. ಭಾಗ್ಯದಲ್ಲಿ ಇದ್ದಹಾಗೆ ಆಗುವುದೆಂದು ತಿಳಿಯಬಾರದು. ಪುರುಷಾರ್ಥದಿಂದಲೇ ಭಾಗ್ಯವು ಸಿಗುತ್ತದೆ. ಪುರುಷಾರ್ಥ ಮಾಡಿಸುವಂತಹ ತಂದೆಯು ಸಿಕ್ಕಿದ್ದಾರೆ ಅವರ ಶ್ರೀಮತದಂತೆ ನಡೆಯದಿದ್ದರೆ ದುರ್ಗತಿಯಾಗುವುದು ಅಂದಾಗ ಮೊಟ್ಟಮೊದಲಿಗೆ ಯಾರಿಗಾದರೂ ಈ ಪದಕವನ್ನು ಕುರಿತು ತಿಳಿಸಿ ನಂತರ ಯಾರು ಯೋಗ್ಯರಾಗಿರುತ್ತಾರೆಯೋ ಅವರು ನಮಗೂ ಸಹ ಇದು ಸಿಗುತ್ತದೆಯೇ ಎಂದು ಕೇಳುತ್ತಾರೆ. ಹೇಳಿ, ಹೌದು ಏಕೆ ಸಿಗುವುದಿಲ್ಲ. ಯಾರು ಈ ಧರ್ಮದವರಾಗಿರುವರೋ ಅವರಿಗೆ ಬಾಣವು ನಾಟುತ್ತದೆ, ಅವರ ಕಲ್ಯಾಣವೂ ಆಗುತ್ತದೆ. ತಂದೆಯಂತೂ ಸೆಕೆಂಡಿನಲ್ಲಿ ಅಂಗೈಯಲ್ಲಿ ಸ್ವರ್ಗವನ್ನು ಕೊಡುತ್ತಾರೆ. ಇದರಲ್ಲಿ ಬಹಳ ಖುಷಿಯಿರಬೇಕು. ನೀವು ಶಿವನ ಭಕ್ತರಿಗೆ ಈ ಜ್ಞಾನವನ್ನು ತಿಳಿಸಿ - ಶಿವತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ನೀವು ರಾಜಾಧಿರಾಜರಾಗುತ್ತೀರಿ. ಇಡೀ ದಿನ ಇದೇ ಸರ್ವೀಸ್ ಮಾಡಿ. ವಿಶೇಷವಾಗಿ ಕಾಶಿಯಲ್ಲಿ ಶಿವನ ಮಂದಿರಗಳು ಬಹಳ ಇವೆ. ಅಲ್ಲಿ ಬಹಳ ಒಳ್ಳೆಯ ಸೇವೆಯಾಗುತ್ತದೆ. ಯಾರಾದರೊಬ್ಬರು ಬಂದೇ ಬರುತ್ತಾರೆ. ಇದು ಬಹಳ ಸಹಜವಾದ ಸೇವೆಯಾಗಿದೆ. ಇದನ್ನು ಯಾರಾದರೂ ಮಾಡಿ ನೋಡಿ. ಭೋಜನವಂತೂ ಅವಶ್ಯವಾಗಿ ಸಿಗುತ್ತದೆ. ಸೇವಾಕೇಂದ್ರವಂತೂ ಅಲ್ಲಿ ಇದ್ದೇ ಇದೆ. ಮೊದಲು ನೀವು ಸರ್ವೀಸ್ ಮಾಡಿ ನೋಡಿ. ಮಂದಿರಕ್ಕೆ ಮುಂಜಾನೆ ಹೋಗಿ ಮತ್ತೆ ರಾತ್ರಿಗೆ ಹಿಂತಿರುಗಿ ಬನ್ನಿ. ಎಲ್ಲದಕ್ಕಿಂತ ಹೆಚ್ಚಿನದಾಗಿ ನೀವು ಶಿವನ ಮಂದಿರದಲ್ಲಿ ಸರ್ವೀಸ್ ಮಾಡಬಹುದು. ಅತಿಶ್ರೇಷ್ಠವಾದುದು ಶಿವನಮಂದಿರವಾಗಿದೆ. ಬಾಂಬೆಯಲ್ಲಿ ಬಬುಲ್ನಾಥನ ಮಂದಿರವಿದೆ. ಅಲ್ಲಿ ಹೋಗಿ ಸರ್ವೀಸ್ ಮಾಡಿ, ಅನೇಕರ ಕಲ್ಯಾಣ ಮಾಡಬಹುದಾಗಿದೆ. ಸರ್ವೀಸ್ ಮಾಡಲು ಈ ಪದಕವೇ ಸಾಕು. ಪ್ರಯೋಗ ಮಾಡಿ ನೋಡಿ. ತಂದೆಯು ತಿಳಿಸುತ್ತಾರೆ - ಈ ಪದಕವನ್ನು ಲಕ್ಷವೇನು 10 ಲಕ್ಷ ಬೇಕಾದರೂ ಮಾಡಿಸಿ. ವೃದ್ಧರೂ ಸಹ ಬಹಳ ಒಳ್ಳೆಯ ಸರ್ವೀಸ್ ಮಾಡಬಹುದು. ಬಹಳಷ್ಟು ಮಂದಿ ಪ್ರಜೆಗಳಾಗುತ್ತಾರೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಸಾಕು. ಮನ್ಮನಾಭವದ ಶಬ್ಧವನ್ನು ಮರೆತುಹೋಗಿದ್ದೀರಿ, ಭಗವಾನುವಾಚವಿದೆಯಲ್ಲವೆ! ಕೃಷ್ಣನು ಭಗವಂತನಲ್ಲ, ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಶಿವತಂದೆಯು ಈ ಕೃಷ್ಣನಿಗೂ ಸಹ ಇಂತಹ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ ಮತ್ತೆ ಅಲೆದಾಡುವ ಅವಶ್ಯಕತೆಯಾದರೂ ಏನು? ಕೇವಲ ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನೀವು ಶಿವನ ಮಂದಿರದಲ್ಲಿ ಎಲ್ಲದಕ್ಕಿಂತ ಚೆನ್ನಾಗಿ ಸರ್ವೀಸ್ ಮಾಡಬಹುದು. ಸರ್ವೀಸಿನ ಸಫಲತೆಗಾಗಿ ದೇಹೀ ಅಭಿಮಾನಿ ಸ್ಥಿತಿಯಲ್ಲಿ ಸ್ಥಿತರಾಗಿ ಸರ್ವೀಸ್ ಮಾಡಿ. ಹೃದಯವು ಸ್ವಚ್ಛವಾಗಿದ್ದರೆ ಬಯಕೆಗಳು ಈಡೇರುತ್ತವೆ. ಕಾಶಿಯಲ್ಲಿ ಸರ್ವೀಸ್ ಮಾಡಲು ತಂದೆಯು ವಿಶೇಷ ಸಲಹೆಯನ್ನು ನೀಡುತ್ತಾರೆ, ಅಲ್ಲಿ ವಾನಪ್ರಸ್ಥಿಗಳ ಆಶ್ರಮವೂ ಇದೆ. ತಿಳಿಸಿ, ನಾವು ಬ್ರಹ್ಮನ ಮಕ್ಕಳು ಬ್ರಾಹ್ಮಣರಾಗಿದ್ದೇವೆ, ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ ಉಪಾಯವಿಲ್ಲ. ಮುಂಜಾನೆಯಿಂದ ಹಿಡಿದು ರಾತ್ರಿಯವರೆಗೆ ಶಿವನ ಮಂದಿರದಲ್ಲಿ ಸರ್ವೀಸ್ ಮಾಡಿ. ಪ್ರಯತ್ನಪಟ್ಟು ನೋಡಿ. ಸ್ವಯಂ ಶಿವತಂದೆಯೇ ತಿಳಿಸುತ್ತಾರೆ - ನನ್ನ ಮಂದಿರಗಳು ಬಹಳಷ್ಟಿವೆ, ನಿಮಗೆ ಅಲ್ಲಿ ಯಾರೂ ಏನೂ ಹೇಳುವುದಿಲ್ಲ. ಇವರು ಶಿವತಂದೆಯ ಮಹಿಮೆ ಮಾಡುತ್ತಾರೆಂದು ಇನ್ನೂ ಹೆಚ್ಚಿನ ಖುಷಿಪಡುತ್ತಾರೆ. ಹೇಳಿ, ಇವರು ಬ್ರಹ್ಮಾ, ಬ್ರಾಹ್ಮಣನಾಗಿದ್ದಾರೆ. ಇವರೇನೂ ದೇವತೆಯಲ್ಲ. ಇವರೂ ಸಹ ಶಿವತಂದೆಯನ್ನು ನೆನಪು ಮಾಡಿ ಈ ಪದವಿಯನ್ನು ಪಡೆಯುತ್ತಾರೆ. ಇವರ ಮೂಲಕ ಶಿವತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ಎಷ್ಟೊಂದು ಸಹಜವಾಗಿದೆ! ವೃದ್ಧರನ್ನು ಯಾರೂ ನಿಂದನೆ ಮಾಡುವುದಿಲ್ಲ. ಕಾಶಿಯಲ್ಲಿ ಇಲ್ಲಿಯವರೆವಿಗೂ ಅಷ್ಟೊಂದು ಸೇವೆಯಾಗಿಲ್ಲ, ಪದಕ ಹಾಗೂ ಚಿತ್ರಗಳ ಮೇಲೆ ತಿಳಿಸುವುದು ಬಹಳ ಸಹಜವಾಗಿದೆ. ಯಾರಾದರೂ ಬಡವರಿದ್ದರೆ ತಿಳಿಸಿ, ನಾವು ನಿಮಗೆ ಉಚಿತವಾಗಿ ಕೊಡುತ್ತೇವೆ. ಸಾಹುಕಾರರಾಗಿದ್ದರೆ ತಿಳಿಸಿ, ನೀವು ಕೊಡುತ್ತೀರೆಂದರೆ ಅನೇಕರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನದಾಗಿ ಮುದ್ರಿಸುತ್ತೇವೆ ಅದರಿಂದ ನಿಮ್ಮ ಕಲ್ಯಾಣವೂ ಆಗುವುದು. ನಿಮ್ಮ ಸೇವೆ ಎಲ್ಲದಕ್ಕಿಂತ ತೀಕ್ಷ್ಣವಾಗಿಬಿಡುವುದು. ಯಾರಾದರೂ ಇದನ್ನು ಪ್ರಯೋಗ ಮಾಡಿ ನೋಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನವನ್ನು ಜೀವನದಲ್ಲಿ ಧಾರಣೆ ಮಾಡಿಕೊಂಡು ನಂತರ ಸರ್ವೀಸ್ ಮಾಡಬೇಕಾಗಿದೆ. ಯಾರು ಹೆಚ್ಚಿನ ಸರ್ವೀಸ್ ಮಾಡುವರೋ, ಒಳ್ಳೆಯ ಲಕ್ಷಣಗಳಿವೆಯೋ ಅವರಪ್ರತಿ ಅವಶ್ಯವಾಗಿ ಗೌರವವನ್ನಿಡಬೇಕಾಗಿದೆ.

2. ಕರ್ಮ ಮಾಡುತ್ತಾ ನೆನಪಿನಲ್ಲಿರುವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ. ಸರ್ವೀಸಿನ ಸಫಲತೆಗಾಗಿ ತಮ್ಮ ಸ್ಥಿತಿಯನ್ನು ದೇಹೀ-ಅಭಿಮಾನಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ.

ವರದಾನ:
ಸರ್ವ ಸಮಸ್ಯೆಗಳ ಬಿಳ್ಕೊಡುಗೆಯ ಸಮಾರೋಹವನ್ನು ಆಚರಿಸುವಂತಹ ಸಮಾಧಾನ ಸ್ವರೂಪ ಭವ

ಸಮಾಧಾನ ಸ್ವರೂಪ ಆತ್ಮಗಳ ಮಾಲೆ ತಯಾರಿ ಯಾವಾಗ ಆಗುವುದೆಂದರೆ ಯಾವಾಗ ನೀವು ತಮ್ಮ ಸಂಪೂರ್ಣ ಸ್ಥಿತಿಯಲ್ಲಿ ಸ್ಥಿತರಾಗುವಿರಿ. ಸಂಪೂರ್ಣ ಸ್ಥಿತಿಯಲ್ಲಿ ಸಮಸ್ಯೆಗಳು ಬಾಲ್ಯತನದ ಆಟದ ಅನುಭವ ಆಗುತ್ತದೆ ಅರ್ಥಾತ್ ಸಮಾಪ್ತಿಯಾಗಿ ಬಿಡುವುದು. ಹೇಗೆ ಬ್ರಹ್ಮಾ ತಂದೆಯ ಮುಂದೆ ಒಂದುವೇಳೆ ಯಾವುದೇ ಮಗು ಸಮಸ್ಯೆಯನ್ನು ತೆಗೆದುಕೊಂಡು ಬಂದರೆ, ಅವರಿಗೆ ಸಮಸ್ಯೆ ಬಗ್ಗೆ ಮಾತನಾಡಲು ಸಾಹಸವಿರುತ್ತಿರಲಿಲ್ಲ, ಆ ಮಾತುಗಳನ್ನೇ ಮರೆತು ಹೋಗುತ್ತಿದ್ದರು. ಹಾಗೆಯೇ ನೀವು ಮಕ್ಕಳು ಸಹ ಸಮಾಧಾನ ಸ್ವರೂಪರಾಗಿ ಅರ್ಧಕಲ್ಪಗಾಗಿ ಸಮಸ್ಯೆಗಳ ಬಿಳ್ಕೊಡುಗೆಯ ಸಮಾರೋಹವಾಗಿ ಬಿಡಲಿ. ವಿಶ್ವದ ಸಮಸ್ಯೆಗಳ ಸಮಾಧಾನವೇ ಪರಿವರ್ತನೆಯಾಗಿದೆ.

ಸ್ಲೋಗನ್:
ಯಾರು ಸದಾ ಜ್ಞಾನದ ಸ್ಮರಣೆ ಮಾಡುತ್ತಾ ಅವರು ಮಾಯೆಯ ಆಕರ್ಷಣೆಯಿಂದ ರಕ್ಷಿಸಲ್ಪಡುತ್ತಾರೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ತಮ್ಮ ಡಬಲ್ ಲೈಟ್ ಮೈಟ್ ಫರಿಶ್ತಾ ಸ್ವರೂಪದಲ್ಲಿ ಸ್ಥಿತರಾಗಿ, ಸಾಕ್ಷಿಯಾಗಿ ಎಲ್ಲಾ ಪಾತ್ರ ನೋಡುತ್ತಾ ಸಕಾಶ ಅರ್ಥಾತ್ ಸಹಯೋಗ ಕೊಡಿ ಏಕೆಂದರೆ ನೀವು ಸರ್ವರ ಕಲ್ಯಾಣಕ್ಕೆ ನಿಮಿತ್ತರಾಗಿದ್ದೀರಿ. ಈ ಸಕಾಶ ಕೊಡುವುದೇ ನಿಭಾಯಿಸುವುದಾಗಿದೆ, ಆದರೆ ಶ್ರೇಷ್ಠ ಸ್ಟೇಜ್ನಲ್ಲಿ ಸ್ಥಿತರಾಗಿ ಸಕಾಶ ಕೊಡಿ. ವಾಣಿಯ ಸೇವೆಯ ಜೊತೆ-ಜೊತೆಗೆ ಮನಸ್ಸಾ ಶುಭ ಭಾವನೆಗಳ ವೃತ್ತಿ ಮೂಲಕ ಸಕಾಶ ಕೊಡುವ ಸೇವೆ ಮಾಡಿ.