08.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಈಶ್ವರೀಯ ಸೇವಾಧಾರಿ ಸತ್ಯವಾದ ರಕ್ಷಣಾ ಸೈನಿಕರಾಗಿದ್ದೀರಿ, ನೀವು ಎಲ್ಲರಿಗೆ ಶಾಂತಿಯ ರಕ್ಷಣೆ
ನೀಡಬೇಕಾಗಿದೆ”
ಪ್ರಶ್ನೆ:
ನೀವು ಮಕ್ಕಳಿಂದ
ಯಾರಾದರೂ ಶಾಂತಿಯ ರಕ್ಷಣೆಯನ್ನು ಕೇಳಿದಾಗ ಅವರಿಗೆ ಏನು ತಿಳಿಸಿಕೊಡಬೇಕು?
ಉತ್ತರ:
ಅವರಿಗೆ ತಿಳಿಸಿ
- ತಂದೆಯು ಹೇಳುತ್ತಾರೆ, ಈಗ ಇಲ್ಲಿಯೇ ನಿಮಗೆ ಶಾಂತಿ ಬೇಕೇ! ಇದೇನು ಶಾಂತಿಧಾಮವಲ್ಲ,
ಶಾಂತಿಧಾಮದಲ್ಲಿ ಸಂಪೂರ್ಣ ಶಾಂತಿಯಿರುತ್ತದೆ, ಅದಕ್ಕೆ ಮೂಲವತನವೆಂದು ಹೇಳಲಾಗುತ್ತದೆ. ಆತ್ಮಕ್ಕೆ
ಯಾವಾಗ ಶರೀರವಿರುವುದಿಲ್ಲವೋ ಆಗ ಶಾಂತವಾಗಿರುತ್ತದೆ. ಸತ್ಯಯುಗದಲ್ಲಿ ಪವಿತ್ರತೆ-ಸುಖ-ಶಾಂತಿ
ಎಲ್ಲವೂ ಇರುತ್ತದೆ. ತಂದೆಯೇ ಬಂದು ಈಗ ಆ ಆಸ್ತಿಯನ್ನು ಕೊಡುತ್ತಾರೆ. ಆದ್ದರಿಂದ ನೀವು ತಂದೆಯನ್ನು
ನೆನಪು ಮಾಡಿ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಎಲ್ಲಾ ಮನುಷ್ಯಾತ್ಮರಿಗೂ ಸಹ ನಮ್ಮಲ್ಲಿ
ಆತ್ಮವಿದೆ ಎಂಬುದು ತಿಳಿದಿದೆ. ಜೀವಾತ್ಮನೆಂದು ಹೇಳುತ್ತಾರಲ್ಲವೆ. ಮೊದಲು ನಾವು ಆತ್ಮಗಳಾಗಿದ್ದೇವೆ,
ನಂತರ ಈ ಶರೀರವು ಸಿಗುತ್ತದೆ. ಯಾರು ತಮ್ಮ ಆತ್ಮವನ್ನು ನೋಡಿಲ್ಲ ಕೇವಲ ಆತ್ಮವೆಂಬುದನ್ನಷ್ಟೆ
ತಿಳಿದುಕೊಂಡಿರುತ್ತಾರೆ, ಹೇಗೆ ಆತ್ಮವನ್ನು ತಿಳಿದುಕೊಂಡಿದ್ದಾರೆ ಆದರೆ ನೋಡಿಲ್ಲವೋ ಅದೇ ರೀತಿ
ಪರಮಪಿತ ಪರಮಾತ್ಮನ ಪ್ರತಿಯೂ ಸಹ ಪರಮ ಆತ್ಮ ಅಂದರೆ ಪರಮಾತ್ಮನೆಂದು ಹೇಳುತ್ತಾರೆ ಆದರೆ ಅವರನ್ನು
ಯಾರೂ ನೋಡಿಲ್ಲ. ತಮ್ಮನ್ನಾಗಲಿ, ತಂದೆಯನ್ನಾಗಲಿ ನೋಡಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ ಆದರೆ ಯಥಾರ್ಥ ರೀತಿಯಿಂದ
ತಿಳಿದುಕೊಂಡಿಲ್ಲ. 84 ಲಕ್ಷ ಯೋನಿಗಳೆಂದು ಹೇಳುತ್ತಾರೆ, ವಾಸ್ತವದಲ್ಲಿ 84 ಜನ್ಮಗಳಿದೆ ಆದರೆ ಯಾವ
ಆತ್ಮಗಳು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನೂ ಸಹ ಅರಿತುಕೊಂಡಿಲ್ಲ. ಆತ್ಮವು
ತಂದೆಯನ್ನು ಕರೆಯುತ್ತದೆ ಆದರೆ ಯಥಾರ್ಥ ರೀತಿಯಲ್ಲಿ ತಿಳಿದುಕೊಂಡಿಲ್ಲ ಅಥವಾ ನೋಡಿಲ್ಲ. ಮೊದಲು
ಆತ್ಮವನ್ನು ಯಥಾರ್ಥ ರೀತಿಯಿಂದ ಅರಿತುಕೊಂಡಾಗಲೇ ತಂದೆಯನ್ನರಿತುಕೊಳ್ಳುವರು. ತಮ್ಮನ್ನೇ
ಅರಿತುಕೊಂಡಿಲ್ಲವೆಂದರೆ ತಿಳಿಸುವವರಾದರೂ ಯಾರು? ಇದಕ್ಕೆ ಸೆಲ್ಫ್ ರಿಯಲೈಸೇಷನ್ ಅರ್ಥಾತ್
ಆತ್ಮಾನುಭೂತಿ ಎಂದು ಹೇಳಲಾಗುತ್ತದೆ. ಅದನ್ನು ತಂದೆಯ ವಿನಃ ಮತ್ತ್ಯಾರು ಮಾಡಿಸಲು ಸಾಧ್ಯವಿಲ್ಲ.
ಆತ್ಮವೆಂದರೇನು, ಅದು ಹೇಗಿದೆ, ಆತ್ಮವು ಎಲ್ಲಿಂದ ಬರುತ್ತದೆ, ಹೇಗೆ ಜನ್ಮ ತೆಗೆದುಕೊಳ್ಳುತ್ತದೆ,
ಹೇಗೆ ಇಷ್ಟು ಸೂಕ್ಷ್ಮ ಆತ್ಮದಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ ಎಂಬುದನ್ನು ಯಾರೂ
ಅರಿತುಕೊಂಡಿಲ್ಲ. ತಮ್ಮನ್ನು ಅರಿತುಕೊಳ್ಳದಿರುವ ಕಾರಣ ತಂದೆಯನ್ನೂ ಅರಿತುಕೊಂಡಿಲ್ಲ. ಈ
ಲಕ್ಷ್ಮೀ-ನಾರಾಯಣರೂ ಸಹ ಮನುಷ್ಯನ ಪದವಿಯೇ ಆಗಿದೆಯಲ್ಲವೆ. ಅವರು ಈ ಪದವಿಯನ್ನು ಹೇಗೆ ಪಡೆದರು?
ಇದನ್ನು ಯಾರೂ ತಿಳಿದುಕೊಂಡಿಲ್ಲ, ಮನುಷ್ಯರೇ ತಿಳಿದುಕೊಳ್ಳಬೇಕಲ್ಲವೆ. ಇವರು ವೈಕುಂಠದ
ಮಾಲೀಕರಾಗಿದ್ದರೆಂದು ಹೇಳುತ್ತಾರೆ ಆದರೆ ಅವರು ಈ ಮಾಲೀಕತನವನ್ನು ತೆಗೆದುಕೊಂಡಿದ್ದಾದರೂ ಹೇಗೆ
ಮತ್ತೆ ಅವರು ಎಲ್ಲಿಗೆ ಹೋದರು? ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಎಲ್ಲವನ್ನೂ
ಅರಿತುಕೊಂಡಿದ್ದೀರಿ. ಮೊದಲು ನೀವೂ ಸಹ ಅರಿತುಕೊಂಡಿರಲಿಲ್ಲ. ಹೇಗೆ ಒಂದು ಮಗು ವಕೀಲರೆಂದರೆ ಮೊದಲೇ
ತಿಳಿದುಕೊಂಡಿರುತ್ತದೆಯೇ? ಓದುತ್ತಾ-ಓದುತ್ತಾ ವಕೀಲನಾಗಿಬಿಡುತ್ತದೆ ಅಂದಮೇಲೆ ಲಕ್ಷ್ಮೀ-ನಾರಾಯಣರು
ಸಹ ವಿದ್ಯಾಭ್ಯಾಸದಿಂದಲೇ ಆಗುತ್ತಾರೆ. ಬ್ಯಾರಿಸ್ಟರಿ, ಡಾಕ್ಟರಿ ಮೊದಲಾದ ಎಲ್ಲದರ
ಪುಸ್ತಕಗಳಿರುತ್ತವೆಯಲ್ಲವೆ. ಹಾಗೆಯೇ ಇದರ ಪುಸ್ತಕವು ಗೀತೆಯಾಗಿದೆ. ಅದನ್ನು ಯಾರು ತಿಳಿಸಿದರು?
ರಾಜಯೋಗವನ್ನು ಯಾರು ಕಲಿಸಿದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಗೀತೆಯಲ್ಲಿ ಹೆಸರನ್ನು
ಬದಲಾಯಿಸಿಬಿಟ್ಟಿದ್ದಾರೆ. ಶಿವಜಯಂತಿಯನ್ನೂ ಆಚರಿಸುತ್ತಾರೆ, ಅವರೇ ಬಂದು ನಿಮ್ಮನ್ನು ಕೃಷ್ಣಪುರಿಯ
ಮಾಲೀಕರನ್ನಾಗಿ ಮಾಡುತ್ತಾರೆ. ಕೃಷ್ಣನು ಸ್ವರ್ಗದ ಮಾಲೀಕನಾಗಿದ್ದನಲ್ಲವೆ. ಆದರೆ ಸ್ವರ್ಗವನ್ನೂ ಸಹ
ತಿಳಿದುಕೊಂಡಿಲ್ಲ. ಇಲ್ಲದಿದ್ದರೆ ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಿದ್ದನೆಂದು ಏಕೆ
ಹೇಳುತ್ತಿದ್ದರು! ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ, ಲಕ್ಷ್ಮಿ-ನಾರಾಯಣರನ್ನು
ಸತ್ಯಯುಗದಲ್ಲಿ, ರಾಮನನ್ನು ತ್ರೇತಾಯುಗದಲ್ಲಿ. ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಯಾವುದೇ
ಉಪದ್ರವಗಳನ್ನು ತೋರಿಸುವುದಿಲ್ಲ. ಕೃಷ್ಣನ ರಾಜ್ಯದಲ್ಲಿ ಕಂಸನನ್ನು, ರಾಮರಾಜ್ಯದಲ್ಲಿ ರಾವಣನನ್ನು
ತೋರಿಸಿದ್ದಾರೆ. ರಾಧೆ-ಕೃಷ್ಣರೇ ಲಕ್ಷ್ಮೀ -ನಾರಾಯಣರಾಗುತ್ತಾರೆಂಬುದು ಯಾರಿಗೂ ತಿಳಿದಿಲ್ಲ.
ಸಂಪೂರ್ಣ ಅಜ್ಞಾನ ಅಂಧಕಾರವಿದೆ. ಅಜ್ಞಾನಕ್ಕೆ ಅಂಧಕಾರವೆಂದು ಹೇಳಲಾಗುತ್ತದೆ, ಜ್ಞಾನಕ್ಕೆ
ಪ್ರಕಾಶತೆಯೆನ್ನಲಾಗುವುದು. ಈಗ ಮತ್ತೆ ಪ್ರಕಾಶಗೊಳಿಸುವವರು ತಂದೆಯೇ ಆಗಿದ್ದಾರೆ. ಜ್ಞಾನಕ್ಕೆ ದಿನ,
ಭಕ್ತಿಗೆ ರಾತ್ರಿಯೆಂದು ಕರೆಯಲಾಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ - ಈ ಭಕ್ತಿಮಾರ್ಗವೂ ಸಹ
ಜನ್ಮ-ಜನ್ಮಾಂತರದಿಂದ ನಡೆಯುತ್ತಾ ಬಂದಿದೆ, ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ. ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತವೆ. ಹೊಸಮನೆಯು ತಯಾರಾಗುತ್ತದೆ ಮತ್ತೆ ದಿನ-ಪ್ರತಿದಿನ ಕಳೆಯುತ್ತಾ
ಹೋದಂತೆ ಆಯಸ್ಸು ಕಡಿಮೆಯಾಗುತ್ತಾ ಹೋಗುವುದು. ಮುಕ್ಕಾಲು ಭಾಗ ಹಳೆಯದಾದಾಗ ಅದಕ್ಕೆ ಹಳೆಯದೆಂದೇ
ಹೇಳುತ್ತಾರೆ. ಮಕ್ಕಳಿಗೆ ಮೊದಲು ಈ ನಿಶ್ಚಯವಿರಬೇಕು - ಇವರು ಸರ್ವರ ತಂದೆಯಾಗಿದ್ದಾರೆ, ಇವರೇ
ಸರ್ವರ ಸದ್ಗತಿ ಮಾಡುತ್ತಾರೆ, ಸರ್ವರಿಗಾಗಿ ವಿದ್ಯೆಯನ್ನೂ ಓದಿಸುತ್ತಾರೆ. ಸರ್ವರನ್ನು
ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಿಮ್ಮ ಬಳಿ ಗುರಿ-ಧ್ಯೇಯವಿದೆ, ನೀವು ಈ ವಿದ್ಯೆಯನ್ನು
ಓದಿ ಹೋಗಿ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತೀರಿ. ಉಳಿದವರೆಲ್ಲರನ್ನೂ ಮುಕ್ತಿಧಾಮಕ್ಕೆ
ಕರೆದುಕೊಂಡು ಹೋಗುತ್ತೇನೆ. ಚಕ್ರದ ಚಿತ್ರದಲ್ಲಿ ತಿಳಿಸುವಾಗ ಅದರಲ್ಲಿ ತೋರಿಸುತ್ತೀರಿ -
ಸತ್ಯಯುಗದಲ್ಲಿ ಈ ಅನೇಕ ಧರ್ಮಗಳಿರಲಿಲ್ಲ, ಆ ಸಮಯದಲ್ಲಿ ಆ ಆತ್ಮಗಳು ನಿರಾಕಾರಿ ಪ್ರಪಂಚದಲ್ಲಿ
ಇರುತ್ತಾರೆ. ಇದಂತೂ ನಿಮಗೆ ತಿಳಿದಿದೆ - ಈ ಆಕಾಶವು ಪೆÇೀಲಾರ್ ಆಗಿದೆ. ಗಾಳಿಗೆ ಗಾಳಿಯೆಂತಲು,
ಆಕಾಶಕ್ಕೆ ಆಕಾಶವೆಂತಲು ಹೇಳುತ್ತಾರೆ. ಎಲ್ಲರೂ ಪರಮಾತ್ಮನೆಂದಲ್ಲ, ಗಾಳಿಯಲ್ಲಿ ಭಗವಂತನಿದ್ದಾರೆ,
ಆಕಾಶದಲ್ಲಿ ಭಗವಂತನಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಈಗ ತಂದೆಯು ಕುಳಿತು ಎಲ್ಲಾ
ಮಾತುಗಳನ್ನು ತಿಳಿಸುತ್ತಾರೆ. ತಂದೆಯ ಬಳಿ ಜನ್ಮವನ್ನಂತೂ ತೆಗೆದುಕೊಂಡಿದ್ದೀರಿ ಮತ್ತೆ ಓದಿಸುವವರು
ಯಾರು? ತಂದೆಯೇ ಆತ್ಮಿಕ ಶಿಕ್ಷಕನಾಗಿ ಓದಿಸುತ್ತಾರೆ. ಓದಿದ್ದು ಪೂರ್ಣ ಆದಾಗ ಮತ್ತೆ ಜೊತೆಯಲ್ಲಿ
ಕರೆದುಕೊಂಡು ಹೋಗುತ್ತಾರೆ ನಂತರ ನೀವು ಪಾತ್ರವನ್ನಭಿನಯಿಸಲು ಬರುತ್ತೀರಿ. ಸತ್ಯಯುಗದಲ್ಲಿ
ಮೊಟ್ಟಮೊದಲಿಗೆ ನೀವೇ ಬಂದಿದ್ದೀರಿ. ಈಗ ಮತ್ತೆ ಎಲ್ಲಾ ಜನ್ಮಗಳ ಅಂತ್ಯದಲ್ಲಿ ಬಂದು ತಲುಪಿದ್ದೀರಿ.
ಪುನಃ ಮೊದಲಿಗೆ ಬರುತ್ತೀರಿ. ಈಗ ಸ್ಪರ್ಧೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಒಳ್ಳೆಯ
ರೀತಿಯಲ್ಲಿ ತಂದೆಯನ್ನು ನೆನಪು ಮಾಡಿ, ಅನ್ಯರಿಗೂ ಓದಿಸಿ ಇಲ್ಲವೆಂದರೆ ಇಷ್ಟೊಂದು ಮಂದಿಗೆ
ಓದಿಸುವವರು ಯಾರು? ತಂದೆಗೆ ಅವಶ್ಯವಾಗಿ ಸಹಯೋಗಿಗಳಾಗಿದ್ದೀರಲ್ಲವೆ? ಈಶ್ವರೀಯ ಸೇವಾಧಾರಿಗಳೆಂದು
ಹೆಸರಿದೆಯಲ್ಲವೆ. ಆಂಗ್ಲಭಾಷೆಯಲ್ಲಿ ಸಾಲ್ವೇಷನ್ ಆರ್ಮಿ ಎಂದು ಹೇಳುತ್ತಾರೆ. ಯಾವ ಸಾಲ್ವೇಷನ್ ಬೇಕು?
ಶಾಂತಿಯ ಸಾಲ್ವೇಷನ್ ಬೇಕು ಎಂದು ಹೇಳುತ್ತಾರೆ. ಆದರೆ ಅವರೇನು ಶಾಂತಿಯ ರಕ್ಷಣೆ ಕೊಡುವುದಿಲ್ಲ.
ಯಾರು ಶಾಂತಿಯ ರಕ್ಷಣೆ ಬೇಡುತ್ತಾರೆಯೋ ಅವರಿಗೆ ತಿಳಿಸಿ - ತಂದೆಯು ಹೇಳುತ್ತಾರೆ, ನಿಮಗೀಗ ಇಲ್ಲಿಯೇ
ಶಾಂತಿಯು ಬೇಕೆ? ಇದೇನು ಶಾಂತಿಧಾಮವಲ್ಲ, ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಇರಲು ಸಾಧ್ಯ,
ಅದಕ್ಕೆ ಮೂಲವತನವೆಂದು ಹೇಳಲಾಗುತ್ತದೆ. ಆತ್ಮಕ್ಕೆ ಶರೀರವಿಲ್ಲದಿರುವಾಗ ಅದು ಶಾಂತಿಯಲ್ಲಿರುತ್ತದೆ.
ತಂದೆಯೇ ಬಂದು ಈ ಆಸ್ತಿಯನ್ನು ಕೊಡುತ್ತಾರೆ, ನಿಮ್ಮಲ್ಲಿಯೂ ಬಹಳ ತಿಳಿಸಿಕೊಡುವ ಬಹಳ
ಯುಕ್ತಿಯಿರಬೇಕು. ಪ್ರದರ್ಶನಿಯಲ್ಲಿ ನಿಂತು ಒಂದುವೇಳೆ ಎಲ್ಲರೂ ತಿಳಿಸುವುದನ್ನು ಕೇಳಿದರೆ ಬಹಳಷ್ಟು
ತಪ್ಪುಗಳನ್ನು ನೋಡಬಹುದು ಏಕೆಂದರೆ ತಿಳಿಸಿಕೊಡುವವರಲ್ಲಿಯೂ ನಂಬರ್ವಾರ್ ಇದ್ದಾರಲ್ಲವೆ. ಎಲ್ಲರೂ
ಏಕರಸವಾಗಿದ್ದರೆ ಭಾಷಣ ಮಾಡಲು ಯಾರನ್ನಾದರೂ ಕಳುಹಿಸಿ ಎಂದು ಬ್ರಾಹ್ಮಿಣಿಯು ಏಕೆ ಬರೆಯುತ್ತಿದ್ದರು!
ಅರೆ! ನೀವೂ ಸಹ ಬ್ರಾಹ್ಮಣರಾಗಿದ್ದೀರಲ್ಲವೆ. ಬಾಬಾ, ಇಂತಿಂತಹವರು ನಮಗಿಂತಲೂ
ಬುದ್ಧಿವಂತರಾಗಿದ್ದಾರೆ, ಬುದ್ಧಿವಂತಿಕೆಯಿಂದಲೇ ಮನುಷ್ಯರು ದರ್ಜೆಯನ್ನು ಪಡೆಯುತ್ತಾರಲ್ಲವೆ.
ನಂಬರ್ವಾರಂತೂ ಇರುತ್ತಾರೆ. ಯಾವಾಗ ಪರೀಕ್ಷೆಯ ಫಲಿತಾಂಶವು ಹೊರಬರುವುದೋ ಆಗ ನಿಮಗೆ ತಾನಾಗಿಯೇ
ಸಾಕ್ಷಾತ್ಕಾರವಾಗುವುದು ಆಗ ನಾವು ಶ್ರೀಮತದನುಸಾರ ನಡೆಯಲಿಲ್ಲವೆಂದು ಪಶ್ಚಾತ್ತಾಪವಾಗುವುದು
ಆದ್ದರಿಂದ ತಂದೆಯು ತಿಳಿಸುತ್ತಾರೆ - ಈಗ ಯಾವುದೇ ವಿಕರ್ಮ ಮಾಡಬೇಡಿ. ದೇಹಧಾರಿಗಳೊಂದಿಗೆ
ಸೆಳೆತವನ್ನಿಟ್ಟುಕೊಳ್ಳಬೇಡಿ. ಇದಂತೂ ಪಂಚತತ್ವಗಳಿಂದಾದ ಶರೀರವಲ್ಲವೆ. ಪಂಚತತ್ವಗಳ ಪೂಜೆಯನ್ನೇನು
ಮಾಡುವುದು ಅಥವಾ ನೆನಪನ್ನೇನು ಮಾಡುವುದು. ಭಲೆ ಈ ಕಣ್ಣುಗಳಿಂದ ನೋಡಿ ಆದರೆ ತಂದೆಯನ್ನು ನೆನಪು
ಮಾಡಿ. ಆತ್ಮಕ್ಕೆ ಈಗ ಜ್ಞಾನವು ಸಿಕ್ಕಿದೆ - ನಾವು ಈಗ ಮನೆಗೆ ಹೋಗಬೇಕಾಗಿದೆ ಮತ್ತೆ ವೈಕುಂಠದಲ್ಲಿ
ಬರುತ್ತೇವೆ. ಆತ್ಮವನ್ನು ಅರಿತುಕೊಳ್ಳಬಹುದು, ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದೇ ರೀತಿ ಇದನ್ನೂ
ಸಹ ಅರಿತುಕೊಳ್ಳಬಹುದಾಗಿದೆ. ಹಾ! ದಿವ್ಯದೃಷ್ಟಿಯಿಂದ ತಮ್ಮ ಮನೆ ಹಾಗೂ ಸ್ವರ್ಗವನ್ನು
ನೋಡಬಹುದಾಗಿದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ, ಮಧ್ಯಾಜೀಭವ ಎಂದರೆ ತಂದೆ ಮತ್ತು
ವಿಷ್ಣುಪುರಿಯನ್ನು ನೆನಪು ಮಾಡಿ. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ. ಮಕ್ಕಳಿಗೆ ಗೊತ್ತಿದೆ, ನಾವು
ಸ್ವರ್ಗದಲ್ಲಿ ಹೋಗಬೇಕಾಗಿದೆ ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗಬೇಕಾಗಿದೆ. ಎಲ್ಲರೂ ಸತ್ಯಯುಗದಲ್ಲಿ
ಬರಲು ಸಾಧ್ಯವಿಲ್ಲ, ನಿಮ್ಮದು ದೇವತಾ ಧರ್ಮವಾಗಿದೆ. ಇದು ಮನುಷ್ಯಧರ್ಮವಾಗಿಬಿಟ್ಟಿದೆ,
ಮೂಲವತನದಲ್ಲಂತೂ ಮನುಷ್ಯರು ಇರುವುದಿಲ್ಲ ಅಲ್ಲವೆ. ಇಲ್ಲಿ ಮನುಷ್ಯ ಸೃಷ್ಟಿಯಿದೆ, ಮನುಷ್ಯರೇ
ತಮೋಪ್ರಧಾನ ಮತ್ತು ಸತೋಪ್ರಧಾನರಾಗುತ್ತಾರೆ. ನೀವೂ ಸಹ ಮೊದಲು ಶೂದ್ರವರ್ಣದಲ್ಲಿದ್ದೀರಿ, ಈಗ
ಬ್ರಾಹ್ಮಣವರ್ಣದಲ್ಲಿ ಬಂದಿದ್ದೀರಿ. ಇವು ಕೇವಲ ಭಾರತವಾಸಿಗಳ ವರ್ಣಗಳಾಗಿವೆ. ಮತ್ತ್ಯಾವುದೇ
ಧರ್ಮದವರಿಗೆ ಬ್ರಾಹ್ಮಣವಂಶಿ ಮತ್ತು ಸೂರ್ಯವಂಶಿ ಎಂದು ಹೇಳುವುದಿಲ್ಲ. ಈ ಸಮಯದಲ್ಲಿ ಎಲ್ಲರೂ
ಶೂದ್ರವರ್ಣದವರಾಗಿದ್ದಾರೆ, ಜಡಜಡೀಭೂತ ಸ್ಥಿತಿಯನ್ನು ಹೊಂದಿದ್ದಾರೆ. ನೀವು ಬಹಳ ಹಳಬರಾಗಿದ್ದೀರಿ
ಆದ್ದರಿಂದ ಇಡೀ ವೃಕ್ಷವೇ ತಮೋಪ್ರಧಾನ, ಜಡಜಡೀಭೂತವಾಗಿದೆ ಮತ್ತೆ ಇಡೀ ವೃಕ್ಷವು ಸತೋಪ್ರಧಾನವಾಗಲು
ಸಾಧ್ಯವೇ? ಸತೋಪ್ರಧಾನರಾಗಿ ಹೊಸವೃಕ್ಷದಲ್ಲಿ ಕೇವಲ ದೇವಿ-ದೇವತಾ ಧರ್ಮದವರೇ ಇರುತ್ತಾರೆ ನಂತರ ನೀವು
ಸೂರ್ಯವಂಶಿಯರಿಂದ ಚಂದ್ರವಂಶಿಯರಾಗುತ್ತೀರಿ. ಪುನರ್ಜನ್ಮವನ್ನಂತೂ ತೆಗೆದುಕೊಳ್ಳುತ್ತೀರಲ್ಲವೆ
ನಂತರ ವೈಶ್ಯ, ಶೂದ್ರವಂಶಿಯರು......... ಇವೆಲ್ಲವೂ ಹೊಸ ಮಾತುಗಳಾಗಿವೆ.
ನಮಗೆ ಓದಿಸುವವರು
ಜ್ಞಾನಸಾಗರನಾಗಿದ್ದಾರೆ. ಅವರೇ ಪತಿತ-ಪಾವನ, ಸರ್ವರ ಸದ್ಗತಿದಾತನಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನಿಮಗೆ ನಾನು ಜ್ಞಾನವನ್ನು ಕೊಡುತ್ತೇನೆ, ಇದರಿಂದ ನೀವು
ದೇವಿ-ದೇವತೆಗಳಾಗಿಬಿಡುತ್ತೀರಿ ಆನಂತರ ಈ ಜ್ಞಾನವಿರುವುದಿಲ್ಲ. ಜ್ಞಾನವನ್ನು ಅಜ್ಞಾನಿಗಳಿಗೇ
ಕೊಡಲಾಗುತ್ತದೆ. ಎಲ್ಲಾ ಮನುಷ್ಯರು ಅಜ್ಞಾನ ಅಂಧಕಾರದಲ್ಲಿದ್ದಾರೆ. ನೀವು ಪ್ರಕಾಶತೆಯಲ್ಲಿದ್ದೀರಿ.
ಇವರ 84 ಜನ್ಮಗಳ ಕಥೆಯನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಸಂಪೂರ್ಣ ಜ್ಞಾನವಿದೆ.
ಭಗವಂತನು ಈ ಸೃಷ್ಟಿಯನ್ನು ರಚಿಸಿದ್ದಾದರೂ ಏಕೆ? ಮೋಕ್ಷವು ಸಿಗುವುದಿಲ್ಲವೆ! ಎಂದು. ಮನುಷ್ಯರು
ಕೇಳುತ್ತಾರೆ - ಅರೆ! ಇದಂತೂ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಅನಾದಿ ನಾಟಕವಾಗಿದೆಯಲ್ಲವೆ. ನಿಮಗೆ
ತಿಳಿದಿದೆ - ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ
ಚಿಂತೆ ಮಾಡುವ ಅವಶ್ಯಕತೆಯಾದರೂ ಏನು? ಆತ್ಮವು ಹೋಗಿ ತನ್ನ ಇನ್ನೊಂದು ಪಾತ್ರವನ್ನಭಿನಯಿಸಿತು.
ಮತ್ತೆ ಆ ವಸ್ತು ಸಿಗಬೇಕೆಂದೇ ಅಳುತ್ತಾರೆ ಆದರೆ ಅದು ಹಿಂತಿರುಗಿ ಬರುವುದಿಲ್ಲ ಅಂದಮೇಲೆ
ಅಳುವುದರಿಂದೇನು ಲಾಭ. ಈಗ ನೀವೆಲ್ಲರೂ ಮೋಹಜೀತರಾಗಬೇಕಾಗಿದೆ. ಈ ಸ್ಮಶಾನದೊಂದಿಗೆ ಮೋಹವನ್ನೇನು
ಇಟ್ಟುಕೊಳ್ಳುವುದು! ಇದರಲ್ಲಿ ದುಃಖವೇ ದುಃಖವಿದೆ. ಇಂದು ಮಗನಿದ್ದಾನೆ ಅದೇ ಮಗನು ನಾಳೆ ತಂದೆಯ
ರುಮಾಲನ್ನು ಎಳೆಯುವುದರಲ್ಲಿಯೂ ತಡಮಾಡುವುದಿಲ್ಲ, ಆ ರೀತಿ ತಯಾರಾಗಿಬಿಡುತ್ತಾನೆ. ತಂದೆಯೊಂದಿಗೂ
ಹೊಡೆದಾಡಲು ತೊಡಗುತ್ತಾನೆ. ಇದಕ್ಕೆ ನಿರ್ಗತಿಕರ ಪ್ರಪಂಚವೆಂದು ಹೇಳಲಾಗುತ್ತದೆ. ಶಿಕ್ಷಣವನ್ನು
ಕೊಡಲು ಧಣಿ-ದೋಣಿ ಯಾರೂ ಇಲ್ಲ. ತಂದೆಯು ಯಾವಾಗ ಇಂತಹ ಸ್ಥಿತಿಯನ್ನು ನೋಡುವರೋ ಆಗ ಧನಿಕರನ್ನಾಗಿ
ಮಾಡಲು ಬರುತ್ತಾರೆ. ತಂದೆಯೇ ಬಂದು ಎಲ್ಲರನ್ನೂ ಧನಿಕರನ್ನಾಗಿ ಮಾಡುತ್ತಾರೆ ಅರ್ಥಾತ್ ಮಾಲೀಕನ
ಮಕ್ಕಳನ್ನಾಗಿ ಮಾಡುತ್ತಾರೆ. ಮಾಲೀಕನು ಬಂದು ಎಲ್ಲರ ಜಗಳ-ಕಲಹಗಳನ್ನು ಕಳೆಯುತ್ತಾರೆ.
ಸತ್ಯಯುಗದಲ್ಲಿ ಯಾವುದೇ ಜಗಳವಿರುವುದಿಲ್ಲ. ಇಡೀ ಪ್ರಪಂಚದ ಜಗಳವನ್ನು ದೂರ ಮಾಡುತ್ತಾರೆ, ಮತ್ತೆ
ಜಯಜಯಕಾರವಾಗಿಬಿಡುತ್ತದೆ. ಇಲ್ಲಿ ಹೆಚ್ಚಿನ ಸಂಖ್ಯೆಯು ಮಾತೆಯರದ್ದಾಗಿದೆ. ಇವರನ್ನೇ ದಾಸಿಯರೆಂದು
ತಿಳಿಯುತ್ತಾರೆ. ಮಾಂಗಲ್ಯವನ್ನು ಕಟ್ಟುವಾಗ ನಿಮ್ಮ ಪತಿಯೇ ಗುರು, ಈಶ್ವರ, ನಿನಗೆ ಸರ್ವಸ್ವವೆಂದು
ಹೇಳುತ್ತಾರೆ. ಮೊದಲು ಪುರುಷ ನಂತರ ಸ್ತ್ರೀ, ಈಗ ತಂದೆಯು ಬಂದು ಮಾತೆಯರನ್ನು ಮುಂದಿಡುತ್ತಾರೆ.
ನಿಮ್ಮ ಮೇಲೆ ಯಾರೂ ಜಯಗಳಿಸಲು ಸಾಧ್ಯವಿಲ್ಲ. ನಿಮಗೆ ತಂದೆಯು ಎಲ್ಲಾ ನಿಯಮಗಳನ್ನು
ಕಲಿಸುತ್ತಿದ್ದಾರೆ, ಮೋಹಜೀತರಾಜನ ಒಂದು ಕಥೆಯಿದೆ, ಅವೆಲ್ಲವೂ ಕಟ್ಟಿರುವ ಕಥೆಗಳಾಗಿವೆ.
ಸತ್ಯಯುಗದಲ್ಲಿ ಅಕಾಲಮೃತ್ಯುವಿರುವುದೇ ಇಲ್ಲ. ಒಂದು ಸಮಯದಲ್ಲಿ ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ಈ ಶರೀರವು ವೃದ್ಧನಾಗಿದೆ, ಹಳೆಯದಾಗಿದೆ. ಈಗ ಮತ್ತೆ
ಹೊಸದನ್ನು ತೆಗೆದುಕೊಳ್ಳಬೇಕು, ಹೋಗಿ ಚಿಕ್ಕಮಗುವಾಗಬೇಕೆಂದು ಸಾಕ್ಷಾತ್ಕಾರವಾಗುತ್ತದೆ ಆಗ
ಖುಷಿಯಿಂದ ಶರೀರವನ್ನು ಬಿಟ್ಟುಬಿಡುತ್ತಾರೆ. ಇಲ್ಲಂತೂ ಭಲೇ ವೃದ್ಧರಾಗಿದ್ದಾಗ, ರೋಗಿಗಳಾಗಿದ್ದಾಗ
ಈ ಶರೀರವನ್ನು ಬಿಟ್ಟುಹೋಗುವುದು ಒಳ್ಳೆಯದೆಂದು ತಿಳಿಯುತ್ತಾರೆ ಆದರೆ ಸಾಯುವ ಸಮಯದಲ್ಲಿ ಖಂಡಿತ
ಅಳುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನೀವು ಇಂತಹ ಜಾಗಕ್ಕೆ ಹೋಗುತ್ತೀರಿ ಎಲ್ಲಿ ಅಳುವ ಹೆಸರೇ
ಇಲ್ಲ. ಅಲ್ಲಂತೂ ಖುಷಿಯೇ ಖುಷಿಯಿರುತ್ತದೆ. ನಿಮಗೆ ಎಷ್ಟೊಂದು ಅಪಾರ ಬೇಹದ್ದಿನ ಖುಷಿಯಿರಬೇಕು -
ಅರೆ! ನಾವು ವಿಶ್ವದ ಮಾಲೀಕರಾಗುತ್ತೇವೆ! ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಈಗ
ತುಂಡು-ತುಂಡಾಗಿಬಿಟ್ಟಿದೆ. ನೀವೇ ಪೂಜ್ಯ ದೇವತೆಗಳಾದ್ದೀರಿ ನಂತರ ಪೂಜಾರಿಗಳಾಗುತ್ತೀರಿ. ಭಗವಂತನು
ತಾನೇ ಪೂಜ್ಯ, ತಾನೇ ಪೂಜಾರಿಯಾಗಲು ಸಾಧ್ಯವೆ! ಒಂದುವೇಳೆ ಅವರು ಪೂಜಾರಿಯಾದರೆ ಪೂಜ್ಯರನ್ನಾಗಿ
ಮಾಡುವವರು ಯಾರು? ನಾಟಕದಲ್ಲಿ ತಂದೆಯ ಪಾತ್ರವೇ ಬೇರೆಯಾಗಿದೆ, ಜ್ಞಾನಸಾಗರನು ಒಬ್ಬರೇ ಆಗಿದ್ದಾರೆ.
ಇವರೊಬ್ಬರದೇ ಮಹಿಮೆಯಿದೆ, ಜ್ಞಾನಸಾಗರನಾಗಿದ್ದಾರೆಂದರೆ ಅವರು ಸದ್ಗತಿಯಾಗಲು ಯಾವಾಗ ಜ್ಞಾನವನ್ನು
ಕೊಡುವುದು. ಅವಶ್ಯವಾಗಿ ಇಲ್ಲಿ ಬರಲೇಬೇಕಾಗುತ್ತದೆ. ಮೊಟ್ಟಮೊದಲಿಗೆ ಬುದ್ಧಿಯಲ್ಲಿ ಇದನ್ನು
ಕುಳ್ಳರಿಸಿ-ನಮಗೆ ಓದಿಸುವವರು ಯಾರು? ತ್ರಿಮೂರ್ತಿ, ಗೋಲ ಮತ್ತು ಕಲ್ಪವೃಕ್ಷ - ಇವು
ಮುಖ್ಯಚಿತ್ರಗಳಾಗಿವೆ. ವೃಕ್ಷವನ್ನು ನೋಡಿದಾಗ ನಾವು ಇಂತಹ ಧರ್ಮದವರಾಗಿದ್ದೇವೆ, ನಾವು
ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ ಎಂಬುದನ್ನು ಬಹುಬೇಗನೆ ಅರಿತುಕೊಳ್ಳಬಹುದು. ಈ ಚಕ್ರದ ಚಿತ್ರವು
ಬಹಳ ದೊಡ್ಡದಿರಬೇಕು. ಸಂಪೂರ್ಣ ಬರವಣಿಗೆಯೂ ಇರಬೇಕು. ಶಿವತಂದೆಯು ಬ್ರಹ್ಮಾರವರ ಮೂಲಕ ದೇವತಾಧರ್ಮ
ಅಂದರೆ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ, ಶಂಕರನ ಮೂಲಕ ಹಳೆಯ ಪ್ರಪಂಚದ ವಿನಾಶ ಮತ್ತು
ವಿಷ್ಣುವಿನ ಮೂಲಕ ಹೊಸಪ್ರಪಂಚದ ಪಾಲನೆ ಮಾಡಿಸುತ್ತಿದ್ದಾರೆ, ಇದು ಸಿದ್ಧವಾಗಲಿ. ಬ್ರಹ್ಮನಿಂದ
ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ. ಇಬ್ಬರಿಗೂ ಸಂಬಂಧವಿದೆಯಲ್ಲವೆ. ಬ್ರಹ್ಮಾ-ಸರಸ್ವತಿಯೇ ಮತ್ತೆ
ಲಕ್ಷ್ಮೀ -ನಾರಾಯಣರಾಗುತ್ತಾರೆ. ಒಂದು ಜನ್ಮದಲ್ಲಿಯೇ ಏರುವಕಲೆಯಾಗುತ್ತದೆ ನಂತರ ಇಳಿಯುವ ಕಲೆಯಲ್ಲಿ
84 ಜನ್ಮಗಳು ಹಿಡಿಸುತ್ತದೆ. ಈಗ ತಂದೆಯು ಕೇಳುತ್ತಾರೆ - ಆ ಶಾಸ್ತ್ರ ಇತ್ಯಾದಿಗಳು ಸರಿಯೋ ಅಥವಾ
ನಾನು ಸರಿಯೇ? ಸತ್ಯವಾದ ಸತ್ಯನಾರಾಯಣನ ಕಥೆಯನ್ನು ನಾನು ತಿಳಿಸುತ್ತೇನೆ. ಸತ್ಯತಂದೆಯ ಮೂಲಕ ನಾವು
ನರನಿಂದ ನಾರಾಯಣರಾಗುತ್ತಿದ್ದೇವೆಂದು ಈಗ ನಿಮಗೆ ನಿಶ್ಚಯವಿದೆ. ಮೊದಲ ಮುಖ್ಯವಾದ ಒಂದುಮಾತು
ಇದಾಗಿದೆ - ಮನುಷ್ಯರಿಗೆಂದೂ ತಂದೆ, ಶಿಕ್ಷಕ, ಸದ್ಗುರುವೆಂದು ಹೇಳಲಾಗುವುದಿಲ್ಲ. ಗುರುವಿಗೆ
ಎಂದಾದರೂ ತಂದೆ ಅಥವಾ ಶಿಕ್ಷಕರೆಂದು ಹೇಳುತ್ತಾರೆಯೇ? ಇಲ್ಲಂತೂ ಶಿವತಂದೆಯ ಬಳಿ ಜನ್ಮಪಡೆಯುತ್ತಾರೆ,
ಶಿವತಂದೆಯು ನಿಮಗೆ ಓದಿಸುತ್ತಾರೆ ಮತ್ತು ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ತಂದೆ,
ಶಿಕ್ಷಕ, ಗುರುವೆಂದು ಕರೆಸಿಕೊಳ್ಳಲು ಅಂತಹ ಮನುಷ್ಯರ್ಯಾರೂ ಇರುವುದಿಲ್ಲ. ಇವರಂತೂ ಒಬ್ಬರೇ
ತಂದೆಯಾಗಿದ್ದಾರೆ. ಇವರಿಗೆ ಪಾರಲೌಕಿಕ ತಂದೆ ಎಂದು ಹೇಳಲಾಗುತ್ತದೆ. ಲೌಕಿಕ ತಂದೆಗೆ ಎಂದೂ
ಪಾರಲೌಕಿಕ ತಂದೆಯೆ ಅಥವಾ ಪರಮಪಿತ ಎಂದು ಹೇಳುವುದಿಲ್ಲ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ.
ಅವರು ತಂದೆಯಂತೂ ಆಗಿಯೇ ಇದ್ದಾರೆ, ದುಃಖದಲ್ಲಿ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ, ಸುಖದಲ್ಲಿ
ಯಾರೂ ಮಾಡುವುದಿಲ್ಲ ಅಂದಾಗ ಆ ತಂದೆಯೇ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಪಂಚತತ್ವಗಳಿಂದಾದ ಈ ಶರೀರವನ್ನು ನೋಡುತ್ತಿದ್ದರೂ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ
ದೇಹಧಾರಿಗಳೊಂದಿಗೆ ಸೆಳೆತವನ್ನಿಡಬಾರದು, ಯಾವುದೇ ವಿಕರ್ಮ ಮಾಡಬಾರದಾಗಿದೆ.
2. ಈ ಮಾಡಿ-ಮಾಡಲ್ಪಟ್ಟ
ನಾಟಕದಲ್ಲಿ ಪ್ರತಿಯೊಂದು ಆತ್ಮಕ್ಕೆ ಅನಾದಿ ಪಾತ್ರವಿದೆ, ಆತ್ಮವು ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತದೆ ಆದ್ದರಿಂದ ಶರೀರವನ್ನು ಬಿಡುವಾಗ ಚಿಂತೆ ಮಾಡಬಾರದು,
ಮೋಹಜೀತರಾಗಬೇಕಾಗಿದೆ.
ವರದಾನ:
ಸಂಪೂರ್ಣ
ಆಹುತಿಯ ಮೂಲಕ ಪರಿವರ್ತನಾ ಸಮರೋಹ ಆಚರಿಸುವವರೇ ಧೃಡ ಸಂಕಲ್ಪಧಾರಿ ಭವ
ಹೇಗೆ ಹೇಳಿಕೆ ಇದೆ “
ಧರಣಿ ಸೀಳಿಹೋದರೂ ಧರ್ಮವನ್ನು ಬಿಡುವುದಿಲ್ಲ”ಎಂದು, ಅಂದರೆ ಯಾವುದೇ ಪರಿಸ್ಥಿತಿ ಬರಲಿ,ಮಾಯೆಯ
ಮಹಾವೀರ ರೂಪ ಎದುರಿಗೆ ಬರಲಿ ಆದರೆ ಧಾರಣೆಗಳು ಮಾತ್ರ ಬಿಡುವುದಿಲ್ಲ. ಸಂಕಲ್ಪದ ಮೂಲಕ
ತ್ಯಜಿಸಿರುವಂತಹ ಕೆಲಸಕ್ಕೆ ಬಾರದ ವಸ್ತುವನ್ನು ಮತ್ತೆ ಸಂಕಲ್ಪದಲ್ಲಿಯೂ ಸ್ವೀಕಾರ ಮಾಡಬಾರದು. ಸದಾ
ತಮ್ಮ , ಶ್ರೇಷ್ಠ ಸ್ವಮಾನ, ಶ್ರೇಷ್ಠ ಸ್ಮøತಿ ಮತ್ತು ಶ್ರೇಷ್ಠ ಜೀವನದ ಸಮರ್ಥ ಸ್ವರೂಪದ ಮೂಲಕ
ಶ್ರೇಷ್ಠ ಪಾತ್ರಧಾರಿಯಾಗಿ ಶ್ರೇಷ್ಠತೆಯ ಆಟ ಆಡುತ್ತಿರಿ. ಬಲಹೀನತೆಗಳ ಆಟ ಸಮಾಪ್ತಿಯಾಗಬೇಕು.
ಯಾವಾಗ ಇಂತಹ ಸಂಪೂರ್ಣ ಆಹುತಿಯ ಸಂಕಲ್ಪ ಧೃಡವಾಗಿರುತ್ತದೆ ಆಗ ಪರಿವರ್ತನೆಯ ಸಮಾರೋಹವಾಗುವುದು. ಈ
ಸಮಾರೋಹದ ತಾರೀಖು ಈಗ ಸಂಗಟಿತ ರೂಪದಲ್ಲಿ ನಿಶ್ಚಿಯಮಾಡಿ.
ಸ್ಲೋಗನ್:
ಸತ್ಯವಾದ
ವಜ್ರವಾಗಿ ತಮ್ಮ ಪ್ರಕಂಪನಗಳ ಹೊಳಪನ್ನು ವಿಶ್ವಕ್ಕೆ ಹರಡಿ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಸಾಧಾರಣ ಸೇವೆ ಮಾಡುವುದು
ಏನು ದೊಡ್ಡ ಮಾತಲ್ಲ, ಆದರೆ ಹಾಳಾಗಿರುವುದನ್ನು ಸರಿಪಡಿಸುವುದು, ಭಿನ್ನತೆಯಲ್ಲಿ ಏಕತೆಯನ್ನು
ತರುವುದು- ಇದು ದೊಡ್ಡ ಮಾತು. ಬಪ್ದಾದಾರವರು ಇದೇ ಹೇಳುತ್ತಾರೆ ಮೊದಲು ಏಕಮತ, ಒಂದು ಬಲ, ಒಂದು
ಭರವಸೆ ಮತ್ತು ಏಕತೆ – ಜೊತಗಾರರಲ್ಲಿ, ಸೇವೆಯಲ್ಲಿ, ವಾಯುಮಂಡಲದಲ್ಲಿರಲಿ.