09.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ವಿನಾಶಕ್ಕೆ ಮೊದಲೇ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ, ಧಾರಣೆ ಮಾಡಿ ಅನ್ಯರಿಗೂ ತಿಳಿಸಿ ಆಗ
ಶ್ರೇಷ್ಠ ಪದವಿಯು ಸಿಗುವುದು”
ಪ್ರಶ್ನೆ:
ರಾಜಯೋಗಿ
ವಿದ್ಯಾರ್ಥಿಗಳಿಗೆ ತಂದೆಯ ಆದೇಶವೇನು?
ಉತ್ತರ:
ನಿಮಗೆ
ಆದೇಶವೇನೆಂದರೆ - ಒಬ್ಬ ತಂದೆಯವರಾಗಿ ಮತ್ತ್ಯಾರೊಂದಿಗೂ ಮನಸ್ಸನ್ನಿಡಬಾರದು, ಪ್ರತಿಜ್ಞೆ ಮಾಡಿದ
ಮೇಲೆ ಮತ್ತೆ ಪತಿತರಾಗಬಾರದು. ನೀವು ಇಂತಹ ಸಂಪೂರ್ಣ ಪಾವನರಾಗಿಬಿಡಿ ತಂದೆ ಮತ್ತು ಶಿಕ್ಷಕರ ನೆನಪು
ಸದಾ ನಿರಂತರವಾಗಿರಲಿ. ಒಬ್ಬ ತಂದೆಯೊಂದಿಗೇ ಪ್ರೀತಿ ಮಾಡಿ, ಅವರನ್ನೇ ನೆನಪು ಮಾಡಿ ಆಗ ನಿಮಗೆ ಬಹಳ
ಶಕ್ತಿಯು ಸಿಗುತ್ತಾ ಇರುವುದು.
ಓಂ ಶಾಂತಿ.
ಆತ್ಮೀಯ ತಂದೆಯು ತಿಳಿಸುತ್ತಾರೆ, ಯಾವಾಗ ಈ ಶರೀರವಿರುವುದೋ ಆಗಲೇ ತಿಳಿಸಿಕೊಡುತ್ತಾರೆ.
ಸನ್ಮುಖದಲ್ಲಿಯೇ ತಿಳಿಸಿಕೊಡಲಾಗುತ್ತದೆ. ಯಾವುದನ್ನು ಸನ್ಮುಖದಲ್ಲಿ ತಿಳಿಸಲಾಗುತ್ತದೆಯೋ ಅದು
ಮತ್ತೆ ಬರವಣಿಗೆಯ ಮೂಲಕ (ಮುರಳಿ) ಎಲ್ಲರ ಬಳಿ ಹೋಗುತ್ತದೆ. ಸನ್ಮುಖದಲ್ಲಿ ಕೇಳುವುದಕ್ಕಾಗಿ
ತಾವಿಲ್ಲಿಗೆ ಬರುತ್ತೀರಿ. ಬೇಹದ್ದಿನ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ, ಆತ್ಮವೇ ಕೇಳುತ್ತದೆ.
ಈ ಶರೀರದ ಮೂಲಕ ಎಲ್ಲವನ್ನೂ ಆತ್ಮವೇ ಮಾಡುತ್ತದೆ ಆದ್ದರಿಂದ ಮೊಟ್ಟಮೊದಲಿಗೆ ತನ್ನನ್ನು ಆತ್ಮನೆಂದು
ತಿಳಿದುಕೊಳ್ಳಬೇಕಾಗಿದೆ. ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ.
ಎಲ್ಲರಿಗಿಂತ ಮೊಟ್ಟಮೊದಲು ತಂದೆಯಿಂದ ಅಗಲಿ ಇಲ್ಲಿಗೆ ಪಾತ್ರವನ್ನಭಿನಯಿಸಲು ಯಾರು ಬರುತ್ತಾರೆ?
ನಿಮ್ಮೊಂದಿಗೆ ಕೇಳುತ್ತೇನೆ - ನೀವು ಎಷ್ಟು ಸಮಯ ತಂದೆಯಿಂದ ಅಗಲಿದ್ದಿರಿ? ಅದಕ್ಕೆ 5000 ವರ್ಷ
ಎಂದು ನೀವು ಹೇಳುತ್ತೀರಿ, ಪೂರ್ಣ ಲೆಕ್ಕವಿದೆಯಲ್ಲವೆ. ಹೇಗೆ ನಂಬರ್ವಾರ್ ಆಗಿ ಕೆಳಗೆ
ಬರುತ್ತೀರೆಂದು ನೀವು ಮಕ್ಕಳಿಗೆ ತಿಳಿದಿದೆ. ಪರಮಧಾಮದಲ್ಲಿದ್ದ ತಂದೆಯೂ ಸಹ ನಿಮ್ಮೆಲ್ಲರ
ಬ್ಯಾಟರಿಯನ್ನು ತುಂಬಲು ಈಗ ಕೆಳಗೆ ಬಂದುಬಿಟ್ಟಿದ್ದಾರೆ ಆದ್ದರಿಂದ ತಂದೆಯನ್ನು ನೆನಪು
ಮಾಡಬೇಕಾಗಿದೆ. ಈಗಂತೂ ತಂದೆಯು ಸನ್ಮುಖದಲ್ಲಿದ್ದಾರಲ್ಲವೆ. ಭಕ್ತಿಮಾರ್ಗದಲ್ಲಂತೂ ತಂದೆಯ ಬಗ್ಗೆ
ತಿಳಿದೇ ಇರಲಿಲ್ಲ. ನಾಮ, ರೂಪ, ದೇಶ, ಕಾಲ ಏನೂ ತಿಳಿದಿರಲಿಲ್ಲ. ನಿಮಗೆ ಈಗ ನಾಮ, ರೂಪ, ದೇಶ,
ಕಾಲದ ಎಲ್ಲದರ ಬಗ್ಗೆಯೂ ತಿಳಿದಿದೆ. ತಂದೆಯು ಈ ರಥದ ಮೂಲಕ ನಮಗೆ ಎಲ್ಲಾ ರಹಸ್ಯವನ್ನು
ತಿಳಿಸುತ್ತಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿದ್ದಾರೆಂದು ನೀವು
ತಿಳಿದುಕೊಂಡಿದ್ದೀರಿ. ಇದು ಎಷ್ಟು ಸೂಕ್ಷ್ಮವಾಗಿದೆ! ಈ ಮನುಷ್ಯ ಸೃಷ್ಟಿರೂಪಿ ವೃಕ್ಷದ ಬೀಜರೂಪನು
ತಂದೆಯೇ ಆಗಿದ್ದಾರೆ. ಅವರಿಲ್ಲಿ ಅವಶ್ಯವಾಗಿ ಬರುತ್ತಾರೆ. ಹೊಸ ಪ್ರಪಂಚದ ಸ್ಥಾಪನೆ ಮಾಡುವುದು ಅವರ
ಕರ್ತವ್ಯವೇ ಆಗಿದೆ. ಅಲ್ಲಿಯೇ ಕುಳಿತು ಸ್ಥಾಪನೆ ಮಾಡುತ್ತಾರೆಂದಲ್ಲ. ನೀವು ಮಕ್ಕಳಿಗೆ ತಿಳಿದಿದೆ,
ತಂದೆಯು ಈ ತನುವಿನ ಮೂಲಕ ನಮಗೆ ಸನ್ಮುಖದಲ್ಲಿ ತಿಳಿಸುತ್ತಿದ್ದಾರೆ. ಇದೂ ಸಹ ತಂದೆಯ
ಪ್ರೀತಿಯಾಯಿತಲ್ಲವೆ, ಮತ್ತ್ಯಾರಿಗೂ ಅವರ ಚರಿತ್ರೆಯ ಬಗ್ಗೆ ತಿಳಿದಿಲ್ಲ. ಗೀತೆಯು ಆದಿಸನಾತನ
ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಇದೂ ಸಹ ನಿಮಗೆ ತಿಳಿದಿದೆ - ಈ ಜ್ಞಾನದ ನಂತರ
ವಿನಾಶವಾಗುತ್ತದೆ. ವಿನಾಶವು ಖಂಡಿತ ಆಗಬೇಕಾಗಿದೆ ಮತ್ತೆಲ್ಲಾ ಯಾವ ಧರ್ಮಸ್ಥಾಪಕರು ಬರುವರೋ ಅವರು
ಬಂದಾಗ ವಿನಾಶವಾಗುವುದಿಲ್ಲ. ವಿನಾಶದ ಸಮಯವೇ ಇದಾಗಿದೆ ಆದ್ದರಿಂದ ನಿಮಗೆ ಯಾವ ಜ್ಞಾನವು
ಸಿಗುತ್ತದೆಯೋ ಅದು ನಂತರ ಸಮಾಪ್ತಿಯಾಗುತ್ತದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಎಲ್ಲಾ ಮಾತುಗಳಿವೆ.
ನೀವು ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿದ್ದೀರಿ. ಇವೆರಡು ಅನಾದಿ, ನಡೆಯುತ್ತಾ ಬರುತ್ತದೆ.
ತಂದೆಯ ಪಾತ್ರವೇ ಸಂಗಮಯುಗದಲ್ಲಿ ಬರುವುದಾಗಿದೆ. ಭಕ್ತಿಯು ಅರ್ಧಕಲ್ಪ ನಡೆಯುತ್ತದೆ, ಜ್ಞಾನವು
ನಡೆಯುವುದಿಲ್ಲ. ಜ್ಞಾನದ ಆಸ್ತಿಯು ಅರ್ಧಕಲ್ಪಕ್ಕಾಗಿ ಸಿಗುತ್ತದೆ, ಜ್ಞಾನವು ಒಂದೇಬಾರಿ ಕೇವಲ
ಸಂಗಮಯುಗದಲ್ಲಿಯೇ ಸಿಗುತ್ತದೆ. ಈ ನಿಮ್ಮ ತರಗತಿಯು ಒಂದೇ ಬಾರಿ ನಡೆಯುತ್ತದೆ. ಈ ಮಾತುಗಳನ್ನು
ಚೆನ್ನಾಗಿ ತಿಳಿದುಕೊಂಡು ಅನ್ಯರಿಗೆ ತಿಳಿಸಲೂಬೇಕಾಗಿದೆ. ಧಾರಣೆ ಮಾಡಿ ಅನ್ಯರಿಗೂ ತಿಳಿಸುವುದರ
ಮೇಲೆ ನಿಮ್ಮ ಪದವಿಯಿದೆ. ವಿನಾಶಕ್ಕೆ ಮೊದಲೇ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕು ಮತ್ತು ರಚನೆಯ
ಆದಿ-ಮಧ್ಯ-ಅಂತ್ಯದ ಪರಿಚಯ ನೀಡಬೇಕಾಗಿದೆ. ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗಲೆಂದು ನೀವು
ತಂದೆಯನ್ನು ನೆನಪು ಮಾಡುತ್ತೀರಿ. ಎಲ್ಲಿಯವರೆಗೆ ತಂದೆಯು ಓದಿಸುತ್ತಿರುತ್ತಾರೆಯೋ ಅಲ್ಲಿಯವರೆಗೆ
ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ಓದಿಸುವವರ ಜೊತೆ ಬುದ್ಧಿಯೋಗವಂತೂ ಇರುತ್ತದೆಯಲ್ಲವೆ. ಶಿಕ್ಷಕರು
ಓದಿಸುತ್ತಾರೆಂದರೆ ಅವರ ಜೊತೆ ಯೋಗವಿರುತ್ತದೆ. ಬುದ್ಧಿಯೋಗವಿಲ್ಲದೆ ಓದುವುದಾದರೂ ಹೇಗೆ? ಯೋಗ
ಎಂದರೆ ಓದಿಸುವವರ ನೆನಪು. ಇವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ
ಆಗಿದ್ದಾರೆ - ಮೂರೂ ರೂಪಗಳಲ್ಲಿ ಪೂರ್ಣ ನೆನಪು ಮಾಡಬೇಕಾಗುತ್ತದೆ. ಈ ಸದ್ಗುರು ನಿಮಗೆ ಒಮ್ಮೆ
ಮಾತ್ರವೇ ಸಿಗುತ್ತಾರೆ. ಜ್ಞಾನದಿಂದ ಸದ್ಗತಿ ಸಿಕ್ಕಿತೆಂದರೆ ಮತ್ತೆ ಗುರುವಿನ ಪಾತ್ರವೇ
ಸಮಾಪ್ತಿಯಾಗುತ್ತದೆ. ತಂದೆ, ಶಿಕ್ಷಕನ ಪಾತ್ರವೇ ನಡೆಯುತ್ತದೆ, ಗುರುವಿನ ಪಾತ್ರವೇ
ಸಮಾಪ್ತಿಯಾಗುತ್ತದೆ. ಸದ್ಗತಿ ಸಿಕ್ಕಿತಲ್ಲವೆ! ನಿರ್ವಾಣಧಾಮದಲ್ಲಿ ನೀವು ಹೋಗುತ್ತೀರಿ ಮತ್ತು
ತಮ್ಮ ಸಮಯದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ನಿಮಗೆ ಮುಕ್ತಿ-ಜೀವನ್ಮುಕ್ತಿ ಎರಡೂ
ಸಿಕ್ಕಿಬಿಡುತ್ತದೆ. ಸ್ವಲ್ಪ ಸಮಯಕ್ಕಾಗಿ ಮನೆಗೆ ಹೋಗುತ್ತೀರಿ, ಇಲ್ಲಂತೂ ಶರೀರದಿಂದ ಪಾತ್ರವನ್ನು
ಅಭಿನಯಿಸಬೇಕಾಗುತ್ತದೆ. ಕೊನೆಯಲ್ಲಿ ಎಲ್ಲಾ ಪಾತ್ರಧಾರಿಗಳು ಬಂದುಬಿಡುತ್ತಾರೆ, ನಾಟಕವು
ಮುಕ್ತಾಯವಾದಾಗ ಎಲ್ಲಾ ಪಾತ್ರಧಾರಿಗಳು ಸ್ಟೇಜಿನ ಮೇಲೆ ಬಂದುಬಿಡುತ್ತಾರೆ. ಈಗಲೂ ಸಹ ಇಲ್ಲಿ ಎಲ್ಲಾ
ಪಾತ್ರಧಾರಿಗಳು ಬಂದು ಸ್ಟೇಜಿನ ಮೇಲೆ ಸೇರಿದ್ದಾರೆ. ಎಷ್ಟು ದೊಡ್ಡ ದೊಂಬಿಯಿದೆ! ಸತ್ಯಯುಗದಲ್ಲಿ
ಇಷ್ಟು ದೊಂಬಿಯಿರುವುದಿಲ್ಲ. ಈಗಂತೂ ಎಷ್ಟೊಂದು ಅಶಾಂತಿಯಿದೆ! ಈಗ ಹೇಗೆ ತಂದೆಗೆ ಸೃಷ್ಟಿಚಕ್ರದ
ಜ್ಞಾನವಿದೆಯೋ ಅದು ಮಕ್ಕಳಿಗೂ ಇದೆ. ನನ್ನ ವೃಕ್ಷವು ಹೇಗೆ ವೃದ್ಧಿಯನ್ನು ಹೊಂದಿ ಮತ್ತೆ
ಸಮಾಪ್ತಿಯಾಗುತ್ತದೆ ಎಂದು ಬೀಜಕ್ಕೆ ಜ್ಞಾನವಿರುತ್ತದೆಯಲ್ಲವೆ! ಈಗ ನೀವು ಹೊಸಪ್ರಪಂಚದ ಸಸಿಯ ನಾಟಿ
ಮಾಡಲು ಅಥವಾ ಆದಿಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ಕುಳಿತಿದ್ದೀರಿ. ಈ
ಲಕ್ಷ್ಮಿ-ನಾರಾಯಣರು ಹೇಗೆ ರಾಜ್ಯವನ್ನು ಪಡೆದರೆಂದು ನಿಮಗೆ ತಿಳಿದಿದೆ. ಇದನ್ನೂ
ತಿಳಿದುಕೊಂಡಿದ್ದೀರಿ, ನಾವೀಗ ಹೊಸಪ್ರಪಂಚದ ರಾಜಕುಮಾರರಾಗುತ್ತೇವೆ, ಆ ಪ್ರಪಂಚದಲ್ಲಿರುವವರೆಲ್ಲರೂ
ತಮ್ಮನ್ನು ಮಾಲೀಕರೆಂದೇ ಹೇಳುತ್ತಾರಲ್ಲವೆ. ಹೇಗೆ ಭಾರತವು ನಮ್ಮ ದೇಶವಾಗಿದೆ ಎಂದು ಈಗಲೂ ಸಹ
ಎಲ್ಲರೂ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಈಗ ನಾವು ಸಂಗಮದಲ್ಲಿ ನಿಂತಿದ್ದೇವೆ,
ಶಿವಾಲಯದಲ್ಲಿ ಹೋಗುವವರಿದ್ದೇವೆ. ಈಗ ಹೋಗುತ್ತೇವೆಂದರೆ ಹೋಗುತ್ತೇವೆ, ನಾವು ಹೋಗಿ ಶಿವಾಲಯದ
ಮಾಲೀಕರಾಗುತ್ತೇವೆ. ಇದೇ ನಿಮ್ಮ ಗುರಿ-ಧ್ಯೇಯವಾಗಿದೆ. ಯಥಾರಾಜ-ರಾಣಿ ತಥಾ ಪ್ರಜಾ ಎಲ್ಲರೂ
ಶಿವಾಲಯದ ಮಾಲೀಕರಾಗಿಬಿಡುತ್ತಾರೆ. ಉಳಿದಂತೆ ರಾಜಧಾನಿಯಲ್ಲಿ ಭಿನ್ನ-ಭಿನ್ನ ಪಾತ್ರಗಳಂತೂ ಇದ್ದೇ
ಇರುತ್ತದೆ. ಅಲ್ಲಿ ಮಂತ್ರಿಗಳೇ ಇರುವುದಿಲ್ಲ. ಯಾವಾಗ ಪತಿತರಾಗುವರೋ ಆಗಲೇ ಮಂತ್ರಿಗಳಾಗುತ್ತಾರೆ.
ಲಕ್ಷ್ಮಿ-ನಾರಾಯಣ, ರಾಮ-ಸೀತೆಯರಿಗೆ ಮಂತ್ರಿಗಳಿರಲಿಲ್ಲವೆಂಬ ಮಾತನ್ನು ಕೇಳಿರಬೇಕು ಏಕೆಂದರೆ ಅವರು
ಸ್ವಯಂ ಸತೋಪ್ರಧಾನ, ಪಾವನ ಬುದ್ಧಿಯವರಾಗಿದ್ದರು ನಂತರ ಪತಿತರಾದಾಗ ರಾಜ-ರಾಣಿಗೆ ಸಲಹೆ
ನೀಡುವುದಕ್ಕಾಗಿ ಒಬ್ಬ ಮಂತ್ರಿಯನ್ನು ನೇಮಿಸುತ್ತಾರೆ. ಈಗಂತೂ ನೋಡಿ, ಅನೇಕಾನೇಕ ಮಂತ್ರಿಗಳಿದ್ದಾರೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಇದು ಬಹಳ ಮಜಾ ಇರುವ ಆಟವಾಗಿದೆ. ಆಟವು ಯಾವಾಗಲೂ ಮಜದಿಂದ ಕೂಡಿರುತ್ತದೆ.
ಸುಖವೂ ಇರುತ್ತದೆ, ದುಃಖವೂ ಇರುತ್ತದೆ. ಈ ಬೇಹದ್ದಿನ ಆಟವನ್ನು ನೀವೇ ತಿಳಿದುಕೊಂಡಿದ್ದೀರಿ.
ಇದರಲ್ಲಿ ಅಳುವ, ದುಃಖಪಡುವ ಮಾತೇ ಇಲ್ಲ. ಗಾಯನವಿದೆ, ಕಳೆದದ್ದನ್ನು ಕಳೆದುಹಾಕಿ.......
ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತದೆ. ಈ ನಾಟಕವು ನಿಮ್ಮ ಬುದ್ಧಿಯಲ್ಲಿದೆ. ನಾವು ಇದರ
ಪಾತ್ರಧಾರಿಗಳಾಗಿದ್ದೇವೆ, ನಮ್ಮ 84 ಜನ್ಮಗಳ ಪಾತ್ರವು ನಿಖರ, ಅವಿನಾಶಿಯಾಗಿದೆ. ಯಾರು ಯಾವ
ಜನ್ಮದಲ್ಲಿ, ಯಾವ ಪಾತ್ರವನ್ನಭಿನಯಿಸುತ್ತಾ ಬಂದಿದ್ದಾರೆಯೋ ಅವರೇ ಮಾಡುತ್ತಾರೆ. ಇಂದಿಗೆ 5000
ವರ್ಷಗಳ ಮೊದಲೂ ಸಹ ನಿಮಗೆ ಇದನ್ನೇ ತಿಳಿಸಿದ್ದೆನು - ತನ್ನನ್ನು ಆತ್ಮವೆಂದು ತಿಳಿಯಿರಿ.
ಗೀತೆಯಲ್ಲಿಯೂ ಈ ಶಬ್ಧವಿದೆ - ನಿಮಗೆ ತಿಳಿದಿದೆ, ಅವಶ್ಯವಾಗಿ ಆದಿಸನಾತನ ದೇವಿ-ದೇವತಾ ಧರ್ಮವು
ಸ್ಥಾಪನೆಯಾದಾಗ ತಂದೆಯು ಹೇಳಿದ್ದರು - ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು, ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಮನ್ಮನಾಭವದ ಅರ್ಥವನ್ನೂ ಸಹ ತಂದೆಯು ಚೆನ್ನಾಗಿ
ತಿಳಿಸಿದ್ದಾರೆ. ಭಾಷೆಯೂ ಇದೇ ಆಗಿದೆ, ಇಲ್ಲಂತೂ ನೋಡಿ ಎಷ್ಟೊಂದು ಭಾಷೆಗಳಿವೆ! ಭಾಷೆಗಳ ಮೇಲೂ ಸಹ
ಎಷ್ಟೊಂದು ಜಗಳವಾಗುತ್ತದೆ. ಭಾಷೆಯಿಲ್ಲದೆ ಕೆಲಸಗಳಾಗಲು ಸಾಧ್ಯವಿಲ್ಲ. ಇಂತಿಂತಹ ಭಾಷೆಗಳನ್ನು
ಕಲಿತು ಬರುತ್ತಾರೆ ಅದರಿಂದ ಮಾತೃಭಾಷೆಯೇ ಸಮಾಪ್ತಿಯಾಗುತ್ತದೆ. ಯಾರು ಹೆಚ್ಚಿನ ಭಾಷೆಗಳನ್ನು
ಕಲಿಯುವರೋ ಅವರಿಗೆ ಬಹುಮಾನವು ಸಿಗುತ್ತದೆ. ಎಷ್ಟು ಧರ್ಮಗಳೋ ಅಷ್ಟು ಭಾಷೆಗಳಿರುತ್ತವೆ. ಅಲ್ಲಂತೂ
ನಿಮಗೆ ತಿಳಿದಿದೆ - ತಮ್ಮದೇ ರಾಜ್ಯವಿರುತ್ತದೆ, ಭಾಷೆಯೂ ಒಂದೇ ಇರುತ್ತದೆ. ಇಲ್ಲಂತೂ ನೂರು
ಮೈಲಿಗಳಿಗೊಂದು ಭಾಷೆಯಿದೆ. ಸತ್ಯಯುಗದಲ್ಲಿ ಒಂದೇ ಭಾಷೆಯಿರುತ್ತದೆ. ಇವೆಲ್ಲಾ ಮಾತುಗಳನ್ನು ತಂದೆಯೇ
ತಿಳಿಸುತ್ತಾರೆ ಅಂದಮೇಲೆ ಆ ತಂದೆಯನ್ನೇ ನೆನಪು ಮಾಡಿ. ಶಿವತಂದೆಯು ಬ್ರಹ್ಮಾರವರ ಮೂಲಕ
ತಿಳಿಸುತ್ತಾರೆ. ರಥವಂತೂ ಅವಶ್ಯವಾಗಿ ಬೇಕಲ್ಲವೆ. ಶಿವತಂದೆಯು ನಮ್ಮ ತಂದೆಯಾಗಿದ್ದಾರೆ, ಅವರೇ
ತಿಳಿಸುತ್ತಾರೆ - ನನಗೆ ಬೇಹದ್ದಿನ ಮಕ್ಕಳಿದ್ದಾರೆ. ತಂದೆಯು ಇವರ ಮೂಲಕ ಓದಿಸುತ್ತಾರಲ್ಲವೆ.
ಶಿಕ್ಷಕರೆಂದಾದರೂ ಆಲಿಂಗನ ಮಾಡಿಕೊಳ್ಳುವರೇ? ತಂದೆಯು ನಿಮಗೆ ಓದಿಸಲು ಬಂದಿದ್ದಾರೆ, ರಾಜಯೋಗವನ್ನು
ಕಲಿಸುತ್ತಾರೆಂದರೆ ಶಿಕ್ಷಕರಾದರಲ್ಲವೆ. ನೀವು ವಿದ್ಯಾರ್ಥಿಗಳಾಗಿದ್ದೀರಿ, ವಿದ್ಯಾರ್ಥಿಗಳೆಂದಾದರೂ
ಶಿಕ್ಷಕರನ್ನು ಆಲಿಂಗನ ಮಾಡಿಕೊಳ್ಳುವರೇ? ಒಬ್ಬ ತಂದೆಯ ಮಕ್ಕಳಾದ ಮೇಲೆ ಮತ್ತ್ಯಾರೊಂದಿಗೂ
ಮನಸ್ಸನ್ನಿಡಬಾರದು.
ತಂದೆಯು ತಿಳಿಸುತ್ತಾರೆ
- ನಾನು ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದೇನೆ, ನೀವು ಶರೀರಧಾರಿಗಳು, ನಾನು ಅಶರೀರಿ ಮತ್ತು
ಪರಮಧಾಮದ ನಿವಾಸಿಯಾಗಿದ್ದೇನೆ. ಬಾಬಾ, ನಮ್ಮನ್ನು ಪಾವನರನ್ನಾಗಿ ಮಾಡಲು ಬನ್ನಿ ಎಂದು ಹೇಳುತ್ತೀರಿ
ಅಂದಮೇಲೆ ನೀವು ಪತಿತರಾಗಿದ್ದೀರಲ್ಲವೆ. ಹಾಗಿದ್ದರೆ ನನ್ನನ್ನು ಆಲಿಂಗನ ಮಾಡಿಕೊಳ್ಳಲು ಹೇಗೆ
ಸಾಧ್ಯ! ಪ್ರತಿಜ್ಞೆ ಮಾಡಿ ಮತ್ತೆ ಪತಿತರಾಗಿಬಿಡುತ್ತಾರೆ. ಯಾವಾಗ ಸಂಪೂರ್ಣ ಪಾವನರಾಗಿಬಿಡುತ್ತೀರೋ
ಆಗ ಅಂತಿಮದಲ್ಲಿ ನೆನಪಿನಲ್ಲಿಯೇ ಇರುತ್ತೀರಿ. ಶಿಕ್ಷಕರನ್ನು, ಗುರುವನ್ನು ನೆನಪು ಮಾಡುತ್ತಾ
ಇರುತ್ತೀರಿ. ಈಗಂತೂ ಪತಿತರಾಗಿ ಕೆಳಗೆ ಬೀಳುತ್ತಾರೆ. ಅವರಿಗೆ ಇನ್ನೂ ನೂರರಷ್ಟು ಶಿಕ್ಷೆಯಾಗುತ್ತದೆ.
ಇವರು (ಬ್ರಹ್ಮಾ) ನಡುವೆ ದಲ್ಲಾಳಿಯ ರೂಪದಲ್ಲಿ ಸಿಕ್ಕಿದ್ದಾರೆ ಆದ್ದರಿಂದ ನನ್ನನ್ನು ನೆನಪು
ಮಾಡಬೇಕಾಗಿದೆ. ಇವರೂ (ಬ್ರಹ್ಮಾ) ಹೇಳುತ್ತಾರೆ - ನಾನೂ ಸಹ ಶಿವತಂದೆಯ ಅನನ್ಯ ಮಗುವಾಗಿದ್ದೇನೆ
ಅಂದಮೇಲೆ ನಾನೆಲ್ಲಿ ತಂದೆಯನ್ನು ಆಲಿಂಗನ ಮಾಡಿಕೊಳ್ಳಲು ಸಾಧ್ಯ. ನೀವಾದರೂ ಈ ಶರೀರದ ಮೂಲಕ ಮಿಲನ
ಮಾಡುತ್ತೀರಿ ಆದರೆ ನಾನು ತಂದೆಯನ್ನು ಹೇಗೆ ಆಲಿಂಗನ ಮಾಡಿಕೊಳ್ಳಲಿ? ತಂದೆಯು ತಿಳಿಸುತ್ತಾರೆ -
ಮಕ್ಕಳೇ, ನೀವು ಒಬ್ಬ ತಂದೆಯನ್ನೇ ನೆನಪು ಮಾಡಿ, ಪ್ರೀತಿ ಮಾಡಿ. ನೆನಪಿನಿಂದ ಬಹಳ ಶಕ್ತಿಯು
ಸಿಗುತ್ತದೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ತಂದೆಯಿಂದಲೇ ನಿಮಗೆ ಇಷ್ಟೊಂದು ಶಕ್ತಿಯು
ಸಿಗುತ್ತದೆ. ನೀವಂತೂ ಎಷ್ಟೊಂದು ಶಕ್ತಿಶಾಲಿಗಳಾಗುತ್ತೀರಿ, ರಾವಣರಾಜ್ಯವೇ ಸಮಾಪ್ತಿಯಾಗುತ್ತದೆ.
ದುಃಖ ಕೊಡುವವರು ಯಾರೂ ಇರುವುದಿಲ್ಲ, ಅದಕ್ಕೆ ಸುಖಧಾಮ ಎಂದು ಹೇಳಲಾಗುತ್ತದೆ. ರಾವಣನು ಇಡೀ
ವಿಶ್ವದಲ್ಲಿ ಎಲ್ಲರಿಗೆ ದುಃಖ ಕೊಡುವವನಾಗಿದ್ದಾನೆ, ಪ್ರಾಣಿಗಳೂ ಸಹ ದುಃಖಿಯಾಗುತ್ತವೆ.
ಸತ್ಯಯುಗದಲ್ಲಿ ಪ್ರಾಣಿಗಳೂ ಸಹ ಪರಸ್ಪರ ಪ್ರೀತಿಯಿಂದಿರುತ್ತವೆ, ಇಲ್ಲಂತೂ ಪ್ರೀತಿಯೇ ಇಲ್ಲ.
ಈ ನಾಟಕವು ಹೇಗೆ
ಸುತ್ತುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದರ ಆದಿ-ಮಧ್ಯ-ಅಂತ್ಯದ
ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರು ಕಡಿಮೆ ಓದುತ್ತಾರೆ
ಅಂದರೆ ಎಲ್ಲರೂ ಓದುತ್ತಾರೆ. ಇಡೀ ಪ್ರಪಂಚವೇ ಓದುತ್ತದೆ ಅರ್ಥಾತ್ ತಂದೆಯನ್ನು ನೆನಪು ಮಾಡುತ್ತಾರೆ.
ತಂದೆಯನ್ನು ನೆನಪು ಮಾಡುವುದೂ ಸಹ ವಿದ್ಯೆಯಾಯಿತಲ್ಲವೆ. ಅಲ್ಲಾಹ್ ಆಗಿದ್ದೇನೆ, ಅಲ್ಲಾಹ್
ಆಗಿದ್ದೇನೆಂದು ಅವರು ಹೇಳುತ್ತಾರೆ. ಇದು ಉಲ್ಟಾ ವಿದ್ಯೆಯಾಗಿದೆ. ಸರ್ವವ್ಯಾಪಿಯೆಂದಾದರೂ ಹೇಳಿ
ಅಥವಾ ನಾನು ಅಲ್ಲಾಹ್ ಆಗಿದ್ದೇನೆಂದಾದರೂ ಹೇಳಿ ಎಲ್ಲವೂ ಒಂದೇ ಮಾತಾಗಿದೆ. ಅದರ ಅರ್ಥವನ್ನು
ತಿಳಿದುಕೊಂಡಿಲ್ಲ. ಅಲ್ಲಾಹ್ ನನ್ನು ನೆನಪು ಮಾಡುತ್ತಾರೆ, ಅವರು ಸರ್ವರ ಸದ್ಗತಿದಾತ, ಎಲ್ಲರಿಗೆ
ಸುಖಕೊಡುವವರಾಗಿದ್ದಾರೆ. ಬಂದು ನಮ್ಮನ್ನು ಪಾವನ ಮಾಡಿ ಎಂದು ಹೇಳುತ್ತಾರೆಂದರೆ ಅವಶ್ಯವಾಗಿ
ಪತಿತರಾದರಲ್ಲವೆ. ಪತಿತರು ಮತ್ತೆ ಅಲ್ಲಾಹ್ ಹೇಗಾಗುತ್ತಾರೆ! ಅಲ್ಲಾಹ್ ವಿಕಾರದಲ್ಲಿ ಹೇಗೆ
ಹೋಗುತ್ತಾರೆ! ಅಲ್ಲಾಹ್ನಂತೂ ಬರುವುದೇ ವಿಕಾರಿಗಳನ್ನು ನಿರ್ವಿಕಾರಿಗಳನ್ನಾಗಿ ಮಾಡಲು. ಹೇ ಅಲ್ಲಾಹ್,
ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಅವರ ಕರ್ತವ್ಯವೇ ಇದಾಗಿದೆ ಆದ್ದರಿಂದ
ಕರೆಯುತ್ತಾರೆ.
ನಿಮ್ಮ ಭಾಷೆಯು ಸಹ
ಸರಿಯಿರಬೇಕು. ಅವರು ಅಲ್ಲಾಹ್ ಎಂದು ಹೇಳುತ್ತಾರೆ, ಇನ್ನೂ ಕೆಲವರು ಗಾಡ್ ಎಂದು ಹೇಳುತ್ತಾರೆ, ಗಾಡ್
ಫಾದರ್ ಎಂತಲೂ ಹೇಳುತ್ತಾರೆ. ಕೊನೆಯಲ್ಲಿ ಬರುವವರ ಬುದ್ಧಿಯಾದರೂ ಸ್ವಲ್ಪ ಚೆನ್ನಾಗಿರುತ್ತದೆ. ಅವರು
ಇಷ್ಟೊಂದು ದುಃಖಿಯಾಗುವುದಿಲ್ಲ. ಈಗ ನೀವು ಸಮ್ಮುಖದಲ್ಲಿ ಕುಳಿತಿದ್ದೀರಿ ಅಂದಾಗ ಏನು ಮಾಡುತ್ತೀರಿ?
ತಂದೆಯನ್ನು ಈ ಭೃಕುಟಿಯಲ್ಲಿ ನೋಡುತ್ತೀರಿ. ತಂದೆಯಂತೂ ಇವರ ಆತ್ಮದ ಪಕ್ಕದಲ್ಲಿ ಕುಳಿತಿದ್ದಾರೆ.
ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನಾನು ಇವರ ಪಕ್ಕದಲ್ಲಿ ಕುಳಿತುಕೊಂಡಿದ್ದೇನೆ, ನನ್ನ
ಪಕ್ಕದಲ್ಲಿ ಕುಳಿತಿದ್ದಾರೆಂದು ಇವರೂ (ಬ್ರಹ್ಮಾ) ಸಹ ತಿಳಿಯುತ್ತಾರೆ. ನಾವು ಸನ್ಮುಖದಲ್ಲಿ
ಇಬ್ಬರನ್ನೂ ನೋಡುತ್ತೇವೆಂದು ನೀವು ಹೇಳುತ್ತೀರಿ. ತಂದೆ ಮತ್ತು ದಾದಾ ಇಬ್ಬರನ್ನೂ ನೀವು
ನೋಡುತ್ತೀರಿ. ಬಾಪ್ದಾದಾ ಎಂದು ಯಾರಿಗೆ ಹೇಳುತ್ತೇವೆಂದು ನಿಮ್ಮಲ್ಲಿ ಜ್ಞಾನವಿದೆ. ಆತ್ಮವು
ಸನ್ಮುಖದಲ್ಲಿ ಕುಳಿತಿದೆ. ಭಕ್ತಿಮಾರ್ಗದಲ್ಲಂತೂ ಕಣ್ಣುಗಳನ್ನು ಮುಚ್ಚಿಕೊಂಡು ಕೇಳುತ್ತಾರೆ.
ವಿದ್ಯೆಯೇನೂ ಈ ರೀತಿಯಿರುವುದಿಲ್ಲ. ಶಿಕ್ಷಕರನ್ನಂತೂ ನೋಡಬೇಕಾಗುತ್ತದೆಯಲ್ಲವೆ. ಇವರು ತಂದೆಯೂ
ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಆದ್ದರಿಂದ ಸಮ್ಮುಖದಲ್ಲಿ ನೋಡಲಾಗುತ್ತದೆ. ಸನ್ಮುಖದಲ್ಲಿ
ಕುಳಿತುಕೊಂಡು ಮತ್ತೆ ಕಣ್ಣುಮುಚ್ಚಿ ತೂಕಡಿಸುವಂತಹ ವಿದ್ಯೆಯಂತೂ ಇರುವುದಿಲ್ಲ. ವಿದ್ಯಾರ್ಥಿಯು
ಶಿಕ್ಷಕರನ್ನು ಅವಶ್ಯವಾಗಿ ನೋಡುತ್ತಿರುವರು. ಇಲ್ಲವೆಂದರೆ ಶಿಕ್ಷಕರು ಇವರು
ತೂಕಡಿಸುತ್ತಿರುತ್ತಾರೆಂದು ಹೇಳುತ್ತಿರುತ್ತಾರೆ. ಇವರು ಭಂಗಿಸೊಪ್ಪನ್ನು ಸೇದಿ ಬಂದಿದ್ದಾರೆ. ಈಗ
ನಿಮ್ಮ ಬುದ್ಧಿಯಲ್ಲಿದೆ - ತಂದೆಯು ಈ (ಬ್ರಹ್ಮಾ) ತನುವಿನಲ್ಲಿದ್ದಾರೆ, ನಾನು ತಂದೆಯನ್ನು
ನೋಡುತ್ತೇನೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳಲು ಇದು
ಸಾಮಾನ್ಯ ತರಗತಿಯಲ್ಲ. ಶಾಲೆಯಲ್ಲಿ ಎಂದಾದರೂ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾರೆಯೇ?
ಅನ್ಯಸತ್ಸಂಗಗಳಿಗೆ ಶಾಲೆಯೆಂದು ಹೇಳಲಾಗುವುದಿಲ್ಲ. ಭಲೆ ಗೀತೆಯನ್ನು ತಿಳಿಸುತ್ತಾರೆ ಆದರೆ ಅದಕ್ಕೆ
ಶಾಲೆಯೆಂದು ಹೇಳಲಾಗುವುದಿಲ್ಲ. ಅವರನ್ನು ನೋಡಲು ಅವರೇನೂ ತಂದೆಯಲ್ಲ, ಕೆಲಕೆಲವರು ಶಿವನ
ಭಕ್ತರಿರುತ್ತಾರೆಂದರೆ ಶಿವನನ್ನೇ ನೆನಪು ಮಾಡುತ್ತಾರೆ, ಕಿವಿಗಳಿಂದ ಕಥೆಯನ್ನು ಕೇಳುತ್ತಿರುತ್ತಾರೆ.
ಶಿವನ ಭಕ್ತಿ ಮಾಡುವವರು ಶಿವನನ್ನೇ ನೆನಪು ಮಾಡಬೇಕಾಗುತ್ತದೆ. ಯಾವುದೇ ಸತ್ಸಂಗದಲ್ಲಿ
ಪ್ರಶ್ನೋತ್ತರಗಳಿರುವುದಿಲ್ಲ, ಇಲ್ಲಿರುತ್ತದೆ. ಇಲ್ಲಿ ನಿಮ್ಮ ಬಹಳ ಸಂಪಾದನೆಯಿದೆ ಅಂದಮೇಲೆ
ಸಂಪಾದನೆಯಲ್ಲೆಂದೂ ಆಕಳಿಕೆ ಬರಲು ಸಾಧ್ಯವಿಲ್ಲ. ಹಣ ಸಿಗುತ್ತದೆಯೆಂದರೆ ಖುಷಿಯಿರುತ್ತದೆ.
ಆಕಳಿಕೆಯು ಚಿಂತೆಯ ಚಿಹ್ನೆಯಾಗಿದೆ. ರೋಗಿಯಾಗಿದ್ದರೆ ಅಥವಾ ದಿವಾಳಿಯಾಗಿದ್ದರೆ ಆಕಳಿಕೆ
ಬರುತ್ತಿರುತ್ತದೆ, ಹಣ ಸಿಗುತ್ತಿದ್ದರೆ ಎಂದೂ ಆಕಳಿಕೆ ಬರುವುದಿಲ್ಲ. ಈ ಬ್ರಹ್ಮಾ ವ್ಯಾಪಾರಿಯೂ
ಆಗಿದ್ದರು, ರಾತ್ರಿಯಲ್ಲಿ ಹಡಗು ಬಂದರೆ ರಾತ್ರಿಯೆಲ್ಲಾ ಜಾಗೃತರಾಗಿರಬೇಕಾಗಿತ್ತು. ಕೆಲವೊಮ್ಮೆ
ರಾಣಿಯು ರಾತ್ರಿಯಲ್ಲಿ ಬಂದರೆ ಆಗ ಕೇವಲ ಸ್ತ್ರೀಯರಿಗಾಗಿಯೇ ತೆರೆದಿರುತ್ತಿತ್ತು. ತಂದೆಯೂ ಸಹ
ಹೇಳುತ್ತಾರೆ - ಪ್ರದರ್ಶನಿ ಇತ್ಯಾದಿಗಳಲ್ಲಿ ಸ್ತ್ರೀಯರಿಗಾಗಿ ವಿಶೇಷ ದಿನವನ್ನಿಡಿ ಆಗ ಅನೇಕರು
ಬರುತ್ತಾರೆ. ಪರದೆಯೊಳಗಿರುವವರೂ ಬರುತ್ತಾರೆ. ಅನೇಕರು ಪರದೆಯೊಳಗಿರುತ್ತಾರೆ. ವಾಹನದಲ್ಲಿಯೂ
ಪರದೆಯಿರುತ್ತದೆ, ಇಲ್ಲಂತೂ ಆತ್ಮದ ಮಾತಾಗಿದೆ. ಜ್ಞಾನವು ಸಿಕ್ಕಿತೆಂದರೆ ಪರದೆಯು ತೆರೆಯುತ್ತದೆ.
ಸತ್ಯಯುಗದಲ್ಲಿ ಮುಸುಕು ಇತ್ಯಾದಿ ಇರುವುದಿಲ್ಲ, ಇದಂತೂ ಪ್ರವೃತ್ತಿ ಮಾರ್ಗದ ಜ್ಞಾನವಲ್ಲವೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಆಟವು ಬಹಳ
ಮಜದಿಂದ ಕೂಡಿದೆ, ಇದರಲ್ಲಿ ಸುಖ ಮತ್ತು ದುಃಖದ ಆಟವು ನಿಗದಿಯಾಗಿದೆ ಆದ್ದರಿಂದ ಅಳುವ ಅಥವಾ
ಶೋಕಿಸುವ ಮಾತೇ ಇಲ್ಲ. ಬುದ್ಧಿಯಲ್ಲಿರಲಿ - ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ,
ಕಳೆದುಹೋಗಿರುವುದರ ಚಿಂತೆ ಮಾಡಬಾರದು.
2. ಇದು ಸಾಮಾನ್ಯವಾದ
ಶಾಲೆಯಲ್ಲ, ಇಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು. ಶಿಕ್ಷಕನನ್ನು ಸಮೀಪದಲ್ಲಿ ನೋಡಬೇಕಾಗಿದೆ
ಆದರೆ ಆಕಳಿಸಬಾರದು. ಆಕಳಿಕೆಯು ಚಿಂತೆಯ ಚಿಹ್ನೆಯಾಗಿದೆ.
ವರದಾನ:
ಸಂತುಷ್ಠತೆಯ
ಮೂರೂ ಸರ್ಟಿಫಿಕೆಟ್ ಪಡೆದು ತಮ್ಮ ಯೋಗಿ ಜೀವನದ ಪ್ರಭಾವ ಬೀರುವಂತಹ ಸಹಜಯೋಗಿ ಭವ.
ಸಂತುಷ್ಠತೆ ಯೋಗಿ ಜೀವನದ
ವಿಶೇಷ ಲಕ್ಷ್ಯವಾಗಿದೆ, ಯಾರು ಸದಾ ಸಂತುಷ್ಠವಾಗಿರುತ್ತಾರೆ ಮತ್ತು ಸರ್ವರನ್ನೂ ಸಂತುಷ್ಠರನ್ನಾಗಿ
ಮಾಡುತ್ತಾರೆ ಅವರ ಯೋಗಿ ಜೀವನದ ಫ್ರಭಾವ ಅನ್ಯರ ಮೇಲೆ ಸ್ವತಃವಾಗಿ ಬೀಳುವುದು. ಹೇಗೆ ಸನ್ಯಾಸತ್ವದ
ಸಾಧನೆಯ ಫ್ರಭಾವ ವಾಯುಮಂಡಲದ ಮೇಲೆ ಬೀಳುವುದು, ಅದೇ ರೀತಿ ಸಹಜಯೋಗಿ ಜೀವನದ ಫ್ರಭಾವವಿರುವುದು.
ಯೋಗೀ ಜೀವನದ ಮೂರು ಸರ್ಟಿಫಿಕೆಟ್ ಆಗಿದೆ ಒಂದು-ಸ್ವಯಂನಿಂದ ಸಂತುಷ್ಟ, ಎರಡನೆಯದು- ತಂದೆ ಸಂತುಷ್ಟ
ಮತ್ತು ಮೂರನೆಯದು-ಲೌಕಿಕ-ಅಲೌಕಿಕ ಪರಿವಾರ ಸಂತುಷ್ಟ.
ಸ್ಲೋಗನ್:
ಸ್ವರಾಜ್ಯದ
ತಿಲಕ, ವಿಶ್ವ ಕಲ್ಯಾಣದ ಕಿರೀಟ ಮತ್ತು ಸ್ಥಿತಿಯ ಸಿಂಹಾಸನದ ಮೇಲೆ ವಿರಾಜಮಾನವಾಗಿರುವಂತಹವರೇ
ರಾಜಯೋಗಿಗಳಾಗಿರುವರು.