29.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಶರೀರ ಸಹಿತ ಏನೆಲ್ಲವೂ ಕಾಣಿಸುತ್ತದೆಯೋ ಅದೆಲ್ಲವೂ ವಿನಾಶವಾಗಲಿದೆ, ನೀವಾತ್ಮಗಳು ಈಗ ಮನೆಗೆ ಹಿಂತಿರುಗಬೇಕಾಗಿದೆ ಆದ್ದರಿಂದ ಹಳೆಯ ಪ್ರಪಂಚವನ್ನು ಮರೆತುಬಿಡಿ”

ಪ್ರಶ್ನೆ:
ನೀವು ಮಕ್ಕಳು ಯಾವ ಶಬ್ಧಗಳಲ್ಲಿ ಎಲ್ಲರಿಗೆ ತಂದೆಯ ಸಂದೇಶವನ್ನು ತಿಳಿಸಬಹುದು?

ಉತ್ತರ:
ಎಲ್ಲರಿಗೆ ತಿಳಿಸಿ- ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ನೀಡಲು ಬಂದಿದ್ದಾರೆ. ಈಗ ಮಿತವಾದ ಆಸ್ತಿಯ ಸಮಯವು ಮುಕ್ತಾಯವಾಯಿತು ಅರ್ಥಾತ್ ಭಕ್ತಿ ಪೂರ್ಣವಾಯಿತು, ಈಗ ರಾವಣರಾಜ್ಯವು ಸಮಾಪ್ತಿಯಾಗುತ್ತದೆ, ನಿಮ್ಮನ್ನು ರಾವಣನ ಪಂಚವಿಕಾರಗಳ ಜೈಲಿನಿಂದ ಮುಕ್ತರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ನೀವು ಪುರುಷಾರ್ಥ ಮಾಡಿ ದೈವೀಗುಣವಂತರಾಗಬೇಕು. ಕೇವಲ ಪುರುಷೋತ್ತಮ ಸಂಗಮಯುಗವನ್ನು ಅರಿತರೂ ಸಹ ಸ್ಥಿತಿಯು ಶ್ರೇಷ್ಠವಾಗಿಬಿಡುತ್ತದೆ.

ಓಂ ಶಾಂತಿ.
ಈಗ ಆತ್ಮೀಯ ಮಕ್ಕಳು ಏನು ಮಾಡುತ್ತಿದ್ದೀರಿ? ಅವ್ಯಭಿಚಾರಿ ನೆನಪಿನಲ್ಲಿ ಕುಳಿತಿದ್ದೀರಿ. ಇದು ಒಂದು ಅವ್ಯಭಿಚಾರಿ ನೆನಪಾಗಿದೆ, ಇನ್ನೊಂದು ವ್ಯಭಿಚಾರಿ ನೆನಪು. ಅವ್ಯಭಿಚಾರಿ ನೆನಪು ಅಥವಾ ಅವ್ಯಭಿಚಾರಿ ಭಕ್ತಿಯು ಮೊದಲು ಪ್ರಾರಂಭವಾದಾಗ ಎಲ್ಲರೂ ಶಿವನ ಪೂಜೆಯನ್ನೇ ಮಾಡುತ್ತಾರೆ. ಸರ್ವಶ್ರೇಷ್ಠ ಭಗವಂತ ಅವರೇ ಆಗಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಓದಿಸುತ್ತಾರೆ. ಏನನ್ನು ಓದಿಸುತ್ತಾರೆ? ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ದೇವತೆಗಳಿಂದ ಮನುಷ್ಯರಾಗಲು ನೀವು ಮಕ್ಕಳಿಗೆ 84 ಜನ್ಮಗಳು ಹಿಡಿಸಿದೆ ಮತ್ತು ಮನುಷ್ಯರಿಂದ ದೇವತೆಗಳಾಗಲು ಒಂದು ಸೆಕೆಂಡ್ ಸಾಕು. ಇದಂತೂ ಮಕ್ಕಳಿಗೆ ತಿಳಿದಿದೆ- ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ. ಅವರು ನಮ್ಮ ಶಿಕ್ಷಕರೂ ಆಗಿದ್ದಾರೆ ಸದ್ಗುರುವೂ ಆಗಿದ್ದಾರೆ. ಒಬ್ಬರ ನೆನಪಿನಲ್ಲಿರಿ ಎಂದು ಯೋಗವನ್ನು ಕಲಿಸುತ್ತಾರೆ ಮತ್ತು ಸ್ವತಃ ತಿಳಿಸುತ್ತಾರೆ- ಹೇ ಆತ್ಮಗಳೇ, ಹೇ ಮಕ್ಕಳೇ, ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ, ಈಗ ಹಿಂತಿರುಗಿ ಹೋಗಬೇಕಾಗಿದೆ. ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆ ಮತ್ತು ಈಗ ಇಲ್ಲಿ ಇರುವಂತಿಲ್ಲ. ಹಳೆಯ ಪ್ರಪಂಚದ ವಿನಾಶಕ್ಕಾಗಿಯೇ ಈ ಅಣ್ವಸ್ತ್ರಗಳನ್ನು ಮಾಡಿದ್ದಾರೆ, ಪ್ರಾಕೃತಿಕ ವಿಕೋಪಗಳೂ ಸಹ ಇದರಲ್ಲಿ ಸಹಯೋಗ ಕೊಡುತ್ತವೆ. ವಿನಾಶವಂತೂ ಅವಶ್ಯವಾಗಿ ಆಗುತ್ತದೆ. ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ನಾವೀಗ ಹಿಂತಿರುಗುತ್ತಿದ್ದೇವೆ ಎಂದು ಆತ್ಮಕ್ಕೆ ಗೊತ್ತಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಈ ಹಳೆಯ ಪ್ರಪಂಚ, ಈ ಹಳೆಯ ದೇಹವನ್ನೂ ಬಿಡಬೇಕಾಗಿದೆ. ದೇಹದ ಸಹಿತ ಈ ಹಳೆಯ ಪ್ರಪಂಚದಲ್ಲಿ ಏನೆಲ್ಲವೂ ಕಾಣಿಸುವುದೋ ಇದೆಲ್ಲವೂ ವಿನಾಶವಾಗುವುದಿದೆ. ಶರೀರವೂ ಸಹ ಸಮಾಪ್ತಿಯಾಗುವುದು. ಈಗ ನಾವು ಆತ್ಮಗಳು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಹಿಂತಿರುಗಿ ಹೋಗದ ವಿನಃ ಹೊಸಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ. ಈಗ ನೀವು ಪುರುಷೋತ್ತಮರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ಈ ದೇವತೆಗಳು ಪುರುಷೋತ್ತಮರಾಗಿದ್ದಾರೆ, ಎಲ್ಲರಿಗಿಂತ ಶ್ರೇಷ್ಠಾತಿಶ್ರೇಷ್ಠ ನಿರಾಕಾರ ತಂದೆಯಾಗಿದ್ದಾರೆ ಮತ್ತು ಮನುಷ್ಯಸೃಷ್ಟಿಯಲ್ಲಿ ಬಂದಾಗ ಇದರಲ್ಲಿ ದೇವತೆಗಳು ಶ್ರೇಷ್ಠರಾಗಿದ್ದಾರೆ, ಅವರೂ ಮನುಷ್ಯರೇ ಆದರೆ ದೈವೀಗುಣವುಳ್ಳವರಾಗಿದ್ದಾರೆ ಮತ್ತೆ ಅವರೇ ಆಸುರೀಗುಣವುಳ್ಳವರಾಗುತ್ತಾರೆ. ಈಗ ಮತ್ತೆ ಆಸುರೀಗುಣಗಳಿಂದ ದೈವೀಗುಣಗಳಲ್ಲಿ ಹೋಗಬೇಕಾಗಿದೆ. ಸತ್ಯಯುಗದಲ್ಲಿ ಹೋಗಬೇಕಾಗಿದೆ. ಯಾರು? ನೀವು ಮಕ್ಕಳು. ಮಕ್ಕಳು ಓದುತ್ತಿದ್ದೀರಿ ಮತ್ತು ಅನ್ಯರಿಗೂ ಓದಿಸುತ್ತೀರಿ. ಕೇವಲ ತಂದೆಯ ಸಂದೇಶವನ್ನೇ ಕೊಡಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ನೀಡಲು ಬಂದಿದ್ದಾರೆ, ಈಗ ಈ ಕ್ಷಣಿಕದ ಆಸ್ತಿಯು ಪೂರ್ಣವಾಗುತ್ತದೆ.

ತಂದೆಯು ತಿಳುವಳಿಕೆ ನೀಡಿದ್ದಾರೆ- ಎಲ್ಲಾ ಮನುಷ್ಯರು ಪಂಚವಿಕಾರಗಳರೂಪಿ ರಾವಣನ ಜೈಲಿನಲ್ಲಿದ್ದಾರೆ, ಎಲ್ಲರೂ ದುಃಖವನ್ನೇ ಪಡೆಯುತ್ತಾರೆ. ಒಣರೊಟ್ಟಿ ಸಿಗುತ್ತದೆ. ತಂದೆಯು ಬಂದು ಎಲ್ಲರನ್ನೂ ರಾವಣನ ಜೈಲಿನಿಂದ ಬಿಡಿಸಿ ಸದಾ ಸುಖಿಯನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮನುಷ್ಯರನ್ನು ಮತ್ತ್ಯಾರೂ ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರಿಂದ ದೇವತೆಗಳಾಗಲು ತಾವಿಲ್ಲಿ ಕುಳಿತಿದ್ದೀರಿ. ಈಗ ಕಲಿಯುಗವಿದೆ, ಅನೇಕ ಧರ್ಮಗಳಾಗಿಬಿಟ್ಟಿವೆ. ನೀವು ಮಕ್ಕಳಿಗೆ ರಚಯಿತ ಮತ್ತು ರಚನೆಯ ಪರಿಚಯವನ್ನು ಸ್ವಯಂ ತಂದೆಯೇ ತಿಳಿಸುತ್ತಾರೆ. ನೀವು ಕೇವಲ ಈಶ್ವರ, ಪರಮಾತ್ಮ ಎಂದು ಹೇಳುತ್ತಿದ್ದೀರಿ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಗುರುವೂ ಆಗಿದ್ದಾರೆಂದು ನಿಮಗೆ ತಿಳಿದಿರಲಿಲ್ಲ. ಅವರಿಗೆ ಸದ್ಗುರುವೆಂದು ಹೇಳಲಾಗುತ್ತದೆ, ಅಕಾಲಮೂರ್ತಿಯೆಂದೂ ಹೇಳುತ್ತಾರೆ. ನಿಮ್ಮನ್ನು ಆತ್ಮ ಮತ್ತು ಜೀವ ಎಂದು ಹೇಳಲಾಗುತ್ತದೆ. ಈ ಅಕಾಲಮೂರ್ತ ತಂದೆಯು ಈ ಶರೀರ ರೂಪಿ ಸಿಂಹಾಸನದಲ್ಲಿ ಕುಳಿತಿದ್ದಾರೆ. ಅವರು ಜನ್ಮ ಪಡೆಯುವುದಿಲ್ಲ ಅಂದಾಗ ಅಕಾಲಮೂರ್ತ ತಂದೆಯು ತಿಳಿಸಿಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನಗೆ ನನ್ನದೇ ಆದ ರಥವಿಲ್ಲ ಅಂದಾಗ ನೀವು ಮಕ್ಕಳನ್ನು ಹೇಗೆ ಪಾವನರನ್ನಾಗಿ ಮಾಡಲಿ! ನನಗೆ ರಥವಂತೂ ಬೇಕಲ್ಲವೆ. ಅಕಾಲಮೂರ್ತನಿಗೂ ಸಿಂಹಾಸನವು ಬೇಕು. ಅಕಾಲ ಸಿಂಹಾಸನವು ಮನುಷ್ಯರದೇ ಇರುತ್ತದೆ, ಮತ್ತ್ಯಾರದೂಅಲ್ಲ. ಪ್ರತಿಯೊಬ್ಬರಿಗೂ ಸಿಂಹಾಸನವು ಬೇಕು, ಅಕಾಲಮೂರ್ತ ಆತ್ಮವು ಇಲ್ಲಿ (ಭೃಕುಟಿ) ವಿರಾಜಮಾನವಾಗಿದೆ. ಅವರು ಎಲ್ಲರ ತಂದೆಯಾಗಿದ್ದಾರೆ, ಅವರಿಗೆ ಮಹಾಕಾಲನೆಂದು ಹೇಳಲಾಗುತ್ತದೆ, ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ. ನೀವಾತ್ಮರು ಪುನರ್ಜನ್ಮದಲ್ಲಿ ಬರುತ್ತೀರಿ, ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಭಕ್ತಿಗೆ ರಾತ್ರಿ, ಜ್ಞಾನಕ್ಕೆ ದಿನವೆಂದು ಹೇಳಲಾಗುತ್ತದೆ, ಇದನ್ನು ಪಕ್ಕಾ ನೆನಪು ಮಾಡಿ. ಮುಖ್ಯವಾದ ಎರಡು ಮಾತುಗಳು- ತಂದೆ ಮತ್ತು ಆಸ್ತಿ. ತಂದೆಯು ಬಂದು ರಾಜ್ಯಭಾಗ್ಯವನ್ನೂ ನೀಡುತ್ತಾರೆ ಮತ್ತು ಆ ರಾಜ್ಯಕ್ಕಾಗಿ ವಿದ್ಯೆಯನ್ನೂ ಓದಿಸುತ್ತಾರೆ ಆದ್ದರಿಂದ ಇದಕ್ಕೆ ಪಾಠಶಾಲೆಯೆಂದೂ ಹೇಳಲಾಗುವುದು. ಭಗವಾನುವಾಚ- ಭಗವಂತನಂತೂ ನಿರಾಕಾರನಾಗಿದ್ದಾರೆ. ಅವರದೂ ಪಾತ್ರವಿರಬೇಕು, ಅವರು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡದೇ ಇರುವಂತಹ ಮನುಷ್ಯರ್ಯಾರೂ ಇಲ್ಲ. ಎಲ್ಲರೂ ಹೃದಯಪೂರ್ವಕವಾಗಿ ಕರೆಯುತ್ತಾರೆ- ಹೇ ಭಗವಂತ, ಹೇ ಮುಕ್ತಿದಾತ, ಓ ಗಾಡ್ಫಾದರ್. ಏಕೆಂದರೆ ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಅವಶ್ಯವಾಗಿ ಬೇಹದ್ದಿನ ಸುಖವನ್ನೇ ಕೊಡುತ್ತಾರೆ. ಲೌಕಿಕತಂದೆಯು ಲೌಕಿಕ ಆಸ್ತಿಯನ್ನು ಕೊಡುತ್ತಾರೆ, ಯಾರಿಗೂ ಗೊತ್ತಿಲ್ಲ ಈಗ ತಂದೆಯು ಬಂದಿದ್ದಾರೆ, ತಿಳಿಸುತ್ತಾರೆ- ಮಕ್ಕಳೇ, ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯಾದ ನನ್ನನ್ನು ನೆನಪು ಮಾಡಿ ಮತ್ತು ಇದನ್ನೂ ತಂದೆಯು ತಿಳಿಸಿದ್ದಾರೆ- ನೀವು ದೇವಿ-ದೇವತೆಗಳು ಹೊಸ ಪ್ರಪಂಚದಲ್ಲಿರುತ್ತೀರಿ ಅಲ್ಲಂತೂ ಅಪಾರ ಸುಖವಿರುತ್ತದೆ ಆಸುಖದ ಅಂತ್ಯವನ್ನು ತಿಳಿಯಲಾಗದು, ಹೊಸಮನೆಯಲ್ಲಿ ಸದಾ ಸುಖವಿರುತ್ತದೆ,ಹಳೆಯದರಲ್ಲಿ ದುಃಖವಿರುತ್ತದೆ. ಹಳೆಯ ಮನೆಯಲ್ಲಿ ದುಃಖವಿರುತ್ತದೆ ಆದ್ದರಿಂದಲೇ ತಂದೆಯು ಮಕ್ಕಳಿಗಾಗಿ ಹೊಸಮನೆಯನ್ನು ಕಟ್ಟಿಸುತ್ತಾರೆ. ಮಕ್ಕಳ ಬುದ್ಧಿಯೋಗವು ಹೊಸ ಮನೆಯಕಡೆ ಹೊರಟುಹೋಗುತ್ತದೆ. ಅದಂತೂ ಅಲ್ಪಕಾಲದ ಮಾತಾಯಿತು. ಇಲ್ಲಿ ತಂದೆಯು ಬೇಹದ್ದಿನ ಹೊಸಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಹಳೆಯ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತಿದ್ದೀರೋ ಅದೆಲ್ಲವೂ ಸ್ಮಶಾನವಾಗಲಿದೆ. ಈಗ ಸತ್ಯಯುಗವು ಸ್ಥಾಪನೆಯಾಗುತ್ತಿದೆ. ನೀವು ಸಂಗಮಯುಗದಲ್ಲಿದ್ದೀರಿ. ಕಲಿಯುಗದ ಕಡೆಯೂ ನೋಡಬಹುದು, ಸತ್ಯಯುಗದ ಕಡೆಯೂ ನೋಡಬಹುದು. ನೀವು ಸಂಗಮಯುಗದಲ್ಲಿ ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತೀರಿ. ಪ್ರದರ್ಶನಿ ಅಥವಾ ಮ್ಯೂಸಿಯಂನಲ್ಲಿ ಬರುತ್ತಾರೆಂದರೆ ಅಲ್ಲಿಯೂ ನೀವು ಸಂಗಮಯುಗದ ಕಡೆ ನಿಲ್ಲಿಸಿ. ಈ ಕಡೆ ಕಲಿಯುಗ, ಆಕಡೆ ಸತ್ಯಯುಗವಿದೆ, ನಾವು ಮಧ್ಯದಲ್ಲಿದ್ದೇವೆ. ತಂದೆಯು ಹೊಸಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ ಅಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಮತ್ತ್ಯಾವುದೇ ಧರ್ಮದವರಿರುವುದಿಲ್ಲ. ನೀವೇ ಮೊಟ್ಟಮೊದಲು ಬರುತ್ತೀರಿ. ಈಗ ನೀವು ಸ್ವರ್ಗದಲ್ಲಿ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ಪಾವನರಾಗುವುದಕ್ಕಾಗಿಯೇ ನನ್ನನ್ನು ಕರೆದಿರಿ- ಹೇ ತಂದೆಯೇ, ನಮ್ಮನ್ನು ಪಾವನರನ್ನಾಗಿ ಮಾಡಿ, ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ. ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುವುದಿಲ್ಲ ಪರಮಧಾಮಕ್ಕೆ ಮಧುರಮನೆ ಎಂದು ಹೇಳಲಾಗುತ್ತದೆ, ಈಗ ನಾವು ಮನೆಗೆ ಹೋಗಬೇಕಾಗಿದೆ, ಅದಕ್ಕೆ ಮುಕ್ತಿಧಾಮವೆಂದು ಹೇಳಲಾಗುತ್ತದೆ, ಅದಕ್ಕಾಗಿಯೇ ಸನ್ಯಾಸಿಗಳು ಶಿಕ್ಷಣ ಕೊಡುತ್ತಾರೆ. ಅವರು ಸುಖಧಾಮದ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ, ನಿವೃತ್ತಿಮಾರ್ಗದವರಾಗಿದ್ದಾರೆ. ಯಾವ-ಯಾವ ಧರ್ಮದವರು ಯಾವಾಗ ಬರುತ್ತಾರೆಂದು ನಿಮಗೆ ತಿಳಿಸಲಾಗಿದೆ. ಮನುಷ್ಯ ಸೃಷ್ಟಿರೂಪಿ ವೃಕ್ಷದಲ್ಲಿ ಮೊಟ್ಟಮೊದಲ ಅಡಿಪಾಯವೇ ನಿಮ್ಮದಾಗಿದೆ. ಬೀಜಕ್ಕೆ ವೃಕ್ಷಪತಿ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ವೃಕ್ಷಪತಿ ಮೇಲೆ ನಿವಾಸ ಮಾಡುತ್ತೇನೆ. ಯಾವಾಗ ವೃಕ್ಷವು ಜಡಜಡೀಭೂತವಾಗುತ್ತದೆಯೋ ಆಗ ನಾನು ದೇವತಾಧರ್ಮವನ್ನು ಸ್ಥಾಪನೆ ಮಾಡಲು ಬರುತ್ತೇನೆ. ಆಲದಮರವು ಬಹಳ ವಿಚಿತ್ರವಾದ ವೃಕ್ಷವಾಗಿದೆ ಅದಕ್ಕೆ ಬುಡ ಅರ್ಥಾತ್ ಬುನಾದಿಯಿಲ್ಲ, ಉಳಿದೆಲ್ಲಾ ವೃಕ್ಷವು ನಿಂತಿದೆ. ಹಾಗೆಯೇ ಈ ಬೇಹದ್ದಿನ ವೃಕ್ಷದಲ್ಲಿ ಆದಿಸನಾತನ ದೇವಿ-ದೇವತಾಧರ್ಮವಿಲ್ಲ. ಉಳಿದೆಲ್ಲಾ ರೆಂಬೆ-ಕೊಂಬೆಗಳು ಅರ್ಥಾತ್ ಧರ್ಮಗಳು ನಿಂತಿವೆ.

ನೀವು ಮೂಲವತನ ನಿವಾಸಿಗಳಾಗಿದ್ದೀರಿ, ನೀವು ಪಾತ್ರವನ್ನಭಿನಯಿಸಲು ಬಂದಿದ್ದೀರಿ. ನೀವು ಮಕ್ಕಳು ಸರ್ವತೋಮುಖ ಪಾತ್ರವನ್ನಭಿನಯಿಸುವವರಾಗಿದ್ದೀರಿ ಆದ್ದರಿಂದ ನಿಮ್ಮದು ಗರಿಷ್ಠ 84 ಜನ್ಮಗಳು, ಕನಿಷ್ಠ ಒಂದು ಜನ್ಮವಾಗಿದೆ. ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳಿಬಿಡುತ್ತಾರೆ. ಅದನ್ನು ಯಾರಿಗೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ- ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಮೊಟ್ಟಮೊದಲು ನನ್ನಿಂದ ಅಗಲುತ್ತೀರಿ. ಸತ್ಯಯುಗೀ ದೇವತೆಗಳೇ ಮೊದಲು ಇರುತ್ತಾರೆ, ಯಾವಾಗ ಆ ಆತ್ಮರು ಇಲ್ಲಿ ಪಾತ್ರವನ್ನಭಿನಯಿಸುತ್ತಾರೆಯೋ ಆಗ ಉಳಿದೆಲ್ಲಾ ಆತ್ಮಗಳು ಎಲ್ಲಿಗೆ ಹೋಗುತ್ತಾರೆ? ಇದೂ ಸಹ ನಿಮಗೆ ಗೊತ್ತಿದೆ, ಉಳಿದೆಲ್ಲಾ ಆತ್ಮಗಳು ಎಲ್ಲಿಗೆ ಹೋಗುತ್ತಾರೆ? ಇದೂ ಸಹ ನಿಮಗೆ ಗೊತ್ತಿದೆ, ಉಳಿದೆಲ್ಲಾ ಆತ್ಮಗಳು ಶಾಂತಿಧಾಮದಲ್ಲಿರುತ್ತಾರೆ, ಶಾಂತಿಧಾಮವು ಬೇರೆಯಾಯಿತಲ್ಲವೆ ಬಾಕಿ ಪ್ರಪಂಚವಂತೂ ಇದೆ. ಇಲ್ಲಿ ಪಾತ್ರವನ್ನಭಿನಯಿಸುತ್ತೀರಿ. ಹೊಸಪ್ರಪಂಚದಲ್ಲಿ ಸುಖದ ಪಾತ್ರ, ಹಳೆಯಪ್ರಪಂಚದಲ್ಲಿ ದುಃಖದ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಇದು ಸುಖ ಮತ್ತು ದುಃಖದ ಆಟವಾಗಿದೆ, ರಾಮರಾಜ್ಯವಾಗಿದೆ. ಪ್ರಪಂಚದಲ್ಲಿ ಯಾವುದೇ ಮನುಷ್ಯರು ಈ ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ರಚಯಿತನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ಜ್ಞಾನಸಾಗರನೆಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ನಾನು ನಿಮಗೇ ತಿಳಿಸುತ್ತೇನೆ ನಂತರ ಇದು ಪ್ರಾಯಲೋಪವಾಗಿಬಿಡುತ್ತದೆ. ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ. ಭಾರತದ್ದೇ ಪ್ರಾಚೀನ ಸಹಜರಾಜಯೋಗವೆಂದೇ ಗಾಯನವಿದೆ. ಗೀತೆಯಲ್ಲಿಯೂ ರಾಜಯೋಗದ ಹೆಸರು ಬರುತ್ತದೆ. ತಂದೆಯು ನಿಮಗೆ ರಾಜಯೋಗವನ್ನು ಕಲಿಸಿ ರಾಜ್ಯಪದವಿಯ ಆಸ್ತಿಯನ್ನು ಕೊಡುತ್ತಾರೆ. ರಚನೆಯಿಂದ ಆಸ್ತಿಯು ಸಿಗುವುದಿಲ್ಲ, ರಚಯಿತ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯರೂ ರಚಯಿತನಾಗಿದ್ದಾರೆ, ಅವರು ತಮ್ಮ ಮಕ್ಕಳನ್ನು ರಚಿಸುತ್ತಾರೆ ಆದರೆ ಅವರು ಹದ್ದಿನ ಬ್ರಹ್ಮಾ, ಇವರು ಬೇಹದ್ದಿನ ಬ್ರಹ್ಮನಾಗಿದ್ದಾರೆ. ಅವರು ಲೌಕಿಕ ತಂದೆಯಾಗಿದ್ದಾರೆ, ಇವರು ನಿರಾಕಾರ ಆತ್ಮಗಳ ಪಿತನಾಗಿದ್ದಾರೆ ಮತ್ತು ಇವರು ಪ್ರಜಾಪಿತನಾಗಿದ್ದಾರೆ. ಪ್ರಜಾಪಿತನು ಯಾವಾಗ ಬೇಕು? ಸತ್ಯಯುಗದಲ್ಲಿಯೇ? ಅಲ್ಲ. ಪುರುಷೋತ್ತಮ ಸಂಗಮಯುಗದಲ್ಲಿ ಪ್ರಜಾಪಿತನು ಬೇಕು. ಸತ್ಯಯುಗವು ಯಾವಾಗ ಸ್ಥಾಪನೆಯಾಗುತ್ತದೆ ಎಂದೂ ಸಹ ಮನುಷ್ಯರಿಗೆ ಗೊತ್ತಿಲ್ಲ, ಅವರು ಸತ್ಯಯುಗ-ಕಲಿಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ಒಂದು ಯುಗಕ್ಕೆ 1250 ವರ್ಷಗಳಿರುತ್ತವೆ ಈ ಜನ್ಮಗಳದ್ದೂ ಲೆಕ್ಕಾಚಾರ ಬೇಕಲ್ಲವೇ ಏಣಿಯ ಲೆಕ್ಕವೂ ಬೇಕಲ್ಲವೆ- ನಾವು ಹೇಗೆ ಇಳಿಯುತ್ತೇವೆ. ಮೊಟ್ಟಮೊದಲು ಬುನಾದಿಯು ದೇವಿ-ದೇವತೆಗಳಾಗಿದ್ದಾರೆ, ಅವರ ನಂತರ ಇಸ್ಲಾಮಿ, ಬೌದ್ಧಿಯರು ಬರುತ್ತಾರೆ. ಹೀಗೆ ತಂದೆಯು ವೃಕ್ಷದ ರಹಸ್ಯವನ್ನೂ ತಿಳಿಸಿದ್ದಾರೆ. ತಂದೆಯ ವಿನಃ ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಚಿತ್ರಗಳನ್ನು ಯಾರು ರಚಿಸಿದರು? ಯಾರು ಕಲಿಸಿದರು? ಎಂದು ನಿಮ್ಮನ್ನು ಕೇಳುತ್ತಾರೆ. ಆಗ ತಿಳಿಸಿ, ತಂದೆಯು ನಮಗೆ ಧ್ಯಾನದಲ್ಲಿ ತೋರಿಸಿದರು ನಂತರ ನಾವು ಇಲ್ಲಿ ಬಂದು ಅದನ್ನು ರಚಿಸುತ್ತೇವೆ ಮತ್ತೆ ತಂದೆಯೇ ಈ ರಥದಲ್ಲಿ ಬಂದು ಅದನ್ನು ಹೀಗೀಗೆ ಮಾಡಿ ಎಂದು ಸರಿಪಡಿಸುತ್ತಾರೆ, ತಾವೇ ತಿದ್ದುಪಡಿ ಮಾಡುತ್ತಾರೆ.

ಕೃಷ್ಣನಿಗೆ ಶ್ಯಾಮಸುಂದರನೆಂದು ಹೇಳುತ್ತಾರೆ ಆದರೆ ಏಕೆ ಹೇಳಲಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದಿಲ್ಲ ವೈಕುಂಠದ ಮಾಲೀಕನಾಗಿದ್ದಾಗ ಸುಂದರನಾಗಿದ್ದ, ಹಳ್ಳಿಯ ಪೋರನಾದಾಗ ಶ್ಯಾಮನಾದನು . ಆದುದರಿಂದ ಶ್ಯಾಮಸುಂದರನೆಂದು ಹೇಳುತ್ತಾರೆ. ಕೃಷ್ಣನೇ ಮೊದಲು ಬರುತ್ತಾನೆ, ತತ್ತ್ವಂ. ಈ ಲಕ್ಷ್ಮೀ-ನಾರಾಯಣರ ರಾಜ್ಯಭಾರವು ನಡೆಯುತ್ತದೆ. ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಯಾರು ಮಾಡುತ್ತಾರೆಂಬುದು ಗೊತ್ತಿಲ್ಲ. ಭಾರತವನ್ನೂ ಸಹ ಮರೆತು ಹಿಂದೂಸ್ಥಾನ ನಿವಾಸಿಗಳು ಹಿಂದೂಗಳೆಂದು ಹೇಳುತ್ತಾರೆ. ನಾನು ಭಾರತದಲ್ಲಿಯೇ ಬರುತ್ತೇನೆ. ಭಾರತದಲ್ಲಿ ಯಾವ ದೇವಿ-ದೇವತೆಗಳ ರಾಜ್ಯವಿತ್ತೋ ಅದು ಈಗ ಪ್ರಾಯಲೋಪವಾಗಿಬಿಟ್ಟಿದೆ, ನಾನು ಅದನ್ನು ಪುನಃ ಸ್ಥಾಪನೆ ಮಾಡಲು ಬರುತ್ತೇನೆ. ಮೊಟ್ಟಮೊದಲನೆಯದೇ ಆದಿಸನಾತನ ದೇವಿ-ದೇವತಾ ಧರ್ಮವಾಗಿದೆ. ಈ ವೃಕ್ಷವು ವೃದ್ಧಿಹೊಂದುತ್ತಾ ಹೋಗುತ್ತದೆ. ಹೊಸ-ಹೊಸ ಎಲೆಗಳು ಮಠಪಂಥಗಳು ಕೊನೆಯಲ್ಲಿ ಬರುತ್ತವೆ ಅಂದಾಗ ಅವುಗಳಿಂದಲೂ ವೃಕ್ಷವು ಶೋಭೆಯಾಗಿಬಿಡುತ್ತದೆ. ನಂತರ ಅಂತಿಮದಲ್ಲಿ ಯಾವಾಗ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿ ಹೊಂದುತ್ತದೆಯೋ ಆಗ ನಾನು ಮತ್ತೆ ಬರುತ್ತೇನೆ. ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ........ ಆತ್ಮವು ತನ್ನನ್ನೂ ತಿಳಿದುಕೊಂಡಿಲ್ಲ, ತಂದೆಯನ್ನೂ ತಿಳಿದುಕೊಂಡಿಲ್ಲ. ತಮಗೂ ನಿಂದನೆ ಮಾಡಿಕೊಳ್ಳುತ್ತಾರೆ, ತಂದೆಗೂ ಮತ್ತು ದೇವತೆಗಳಿಗೂ ನಿಂದನೆ ಮಾಡುತ್ತಿರುತ್ತಾರೆ. ತಮೋಪ್ರಧಾನ.ತಿಳುವಳಿಕೆ ಹೀನರಾದಾಗ ನಾನು ಬರುತ್ತೇನೆ, ಪತಿತ ಪ್ರಪಂಚದಲ್ಲೇ ಬರಬೇಕಾಗುತ್ತದೆ. ನೀವು ಮನುಷ್ಯರಿಗೆ ಜೀವಧಾನ ಮಾಡುವಿರಿ ಅಂದರೆ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವಿರಿ ಎಲ್ಲಾ ದುಃಖಗಳಿಂದ ಅರ್ಧಕಲ್ಪಕ್ಕಾಗಿ ದೂರ ಮಾಡಿಬಿಡುತ್ತೀರಿ. ವಂದೇಮಾತರಂ ಎಂದು ಗಾಯನವೂ ಇದೆಯಲ್ಲವೆ. ಯಾವ ಮಾತೆಯರು, ಯಾರ ವಂದನೆ ಮಾಡುತ್ತಾರೆ? ನೀವು ಮಾತೆಯರಾಗಿದ್ದೀರಿ, ಇಡೀ ಸೃಷ್ಟಿಯನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಭಲೆ ಪುರುಷರೂ ಇದ್ದಾರೆ ಆದರೆ ಮೆಜಾರಿಟಿ ಮಾತೆಯರದಾಗಿದೆ ಆದ್ದರಿಂದ ತಂದೆಯು ಮಾತೆಯರ ಮಹಿಮೆ ಮಾಡುತ್ತಾರೆ. ತಂದೆಯು ಬಂದು ನಿಮ್ಮನ್ನು ಇಷ್ಟೊಂದು ಮಹಿಮೆಗೆ ಯೋಗ್ಯರನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಪಾರ ಸುಖದ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಸಂಗಮದಲ್ಲಿ ನಿಲ್ಲಬೇಕು. ಸಾಕ್ಷಿಯಾಗಿ ಎಲ್ಲವನ್ನೂ ನೋಡುತ್ತಾ ಬುದ್ಧಿಯೋಗವನ್ನು ಹೊಸಪ್ರಪಂಚದಲ್ಲಿಡಬೇಕು. ಬುದ್ಧಿಯಲ್ಲಿರಲಿ- ಈಗ ನಾವು ಹಿಂತಿರುಗಿ ಮನೆಗೆ ಹೋಗುತ್ತಿದ್ದೇವೆ.

2. ಎಲ್ಲರಿಗೆ ಜೀವದಾನ ನೀಡಬೇಕು. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಬೇಹದ್ದಿನ ತಂದೆಯಿಂದ ಓದಿ ಅನ್ಯರಿಗೂ ಓದಿಸಬೇಕಾಗಿದೆ. ದೈವೀಗುಣಗಳನ್ನು ಧಾರಣೆ ಮಾಡಿ ಮತ್ತು ಮಾಡಿಸಬೇಕು.

ವರದಾನ:
ಸದಾ ಶ್ರೇಷ್ಠ ಸಮಯದನುಸಾರವಾಗಿ ಶ್ರೇಷ್ಠ ಕರ್ಮವನ್ನು ಮಾಡುತ್ತಾ ವಾಹ್-ವಾಹ್ನ ಗೀತೆಯನ್ನು ಹಾಡುವಂತಹ ಭಾಗ್ಯವಂತ ಆತ್ಮಾ ಭವ

ಈ ಶ್ರೇಷ್ಠ ಸಮಯದಲ್ಲಿ ಸದಾ ಶ್ರೇಷ್ಠ ಕರ್ಮವನ್ನು ಮಾಡುತ್ತಾ “ವಾಹ್-ವಾಹ್”ನ ಗೀತೆಯನ್ನು ಮನಸ್ಸಿನಿಂದ ಹಾಡುತ್ತಿರಿ. “ವಾಹ್ ನನ್ನ ಶ್ರೇಷ್ಠ ಕರ್ಮವೇ ಅಥವ ವಾಹ್ ಶ್ರೇಷ್ಠ ಕರ್ಮವನ್ನು ಕಲಿಸುವಂತಹ ತಂದೆಯೇ” ಅಂದಾಗ ಸದಾ ವಾಹ್-ವಾಹ್! ನ ಗೀತೆಯನ್ನು ಹಾಡಿರಿ. ಎಂದೂ ಸಹ ತಪ್ಪಾಗಿಯೂ ದುಃಖದ ದೃಶ್ಯವನ್ನು ನೋಡುತ್ತಿದ್ದರೂ ಅಯ್ಯೊ ಎನ್ನುವ ಶಬ್ಧವು ಬರಬಾರದು. ವಾಹ್ ಡ್ರಾಮಾ ವಾಹ್! ಮತ್ತು ವಾಹ್ ಬಾಬಾ ವಾಹ್! ಯಾವುದು ಸ್ವಪ್ನದಲ್ಲಿಯೂ ಇರಲಿಲ್ಲವೋ ಅದು ಮನೆಯಲ್ಲಿ ಕುಳಿತಿದ್ದಂತೆಯೇ ಸಿಕ್ಕಿಬಿಟ್ಟಿತು. ಇದೇ ಭಾಗ್ಯದ ನಶೆಯಲ್ಲಿರಿ.

ಸ್ಲೋಗನ್:
ಮನಸ್ಸು-ಬುದ್ಧಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿರಿ ಆಗ ಯಾವುದೇ ಏರುಪೇರಿನಲ್ಲಿಯೂ ಅಚಲ-ಅಡೋಲರಾಗಿರುತ್ತೀರಿ.